ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬುಧವಾರ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಮಂಕಾಳು ವೈದ್ಯರ ಫೋಟೋದ ಜೊತೆ `ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ’ ಎಂಬ ನಾಮಫಲಕಗಳು ಕಾಣಿಸಿದವು.
ಬಿಜೆಪಿ ರೈತಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಹಾಗೂ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಯಲ್ಲಾಪುರದಲ್ಲಿ ಭಾರೀ ಪ್ರಮಾಣದಲ್ಲಿ ಬಿಜೆಪಿಗರು ಪ್ರತಿಭಟಿಸಿದರು. ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರದಲ್ಲಿನ ಅನ್ಯಾಯ, ರೈತರ ಮೇಲೆ ದಬ್ಬಾಳಿಕೆ, ಕೇಂದ್ರದ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ತಾರತಮ್ಯ, ಕಬ್ಬು, ಜೋಳ, ಹತ್ತಿ ಸೇರಿ ವಿವಿಧ ಬೆಳೆ ಬೆಳೆಯುವವರಿಗೆ ಸೌಲಭ್ಯ ಇಲ್ಲದಿರುವಿಕೆಯನ್ನು ಬಿಜೆಪಿಗರು ಖಂಡಿಸಿದರು.
ಚಾಪೆ ಹಾಸಿ ಮಲಗಿದ ಪ್ರತಿಭಟನಾಕಾರರು!
ರೈತರ ಸಮಸ್ಯೆಗಳ ಬಗ್ಗೆ ಭಾಷಣ ಮಾಡಿದ ನಾಯಕರು ಸರ್ಕಾರದ ಮನಪರಿವರ್ತನೆಗಾಗಿ ಮನವಿ ಸಲ್ಲಿಸಲು ಮುಂದಾಗಿದ್ದರು. ಮೆರವಣಿಗೆ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಗೆ ಬಂದಾಗ ಅಲ್ಲಿ ಮನವಿ ಸ್ವೀಕರಿಸಲು ಅಧಿಕಾರಿಗಳೇ ಇರಲಿಲ್ಲ. ಇದರಿಂದ ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ಕೊನೆಗೆ ತಹಶೀಲ್ದಾರ್ ಕಚೇರಿ ಎದುರೇ ಚಾಪೆ ಹಾಸಿ ಮಲಗಿದರು. ಅಧಿಕಾರಿಗಳು ಬಂದ ನಂತರ ಅವರಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡುವಂತೆ ಕೋರಿದರು.
ಶಾಸಕ ಹೆಬ್ಬಾರ್ ವಿರುದ್ಧ ಗರಂ
ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲ್ ಟಿ ಪಾಟೀಲ್ ತಮ್ಮ ಭಾಷಣದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವಿರುದ್ಧ ವಾಗ್ದಾಳಿ ನಡೆಸಿದರು. `ಬಿಜೆಪಿಯಿಂದ ಆಯ್ಕೆಯಾಗಿ ಈಗ ಕಾಂಗ್ರೆಸ್ ಹಾದಿ ಹಿಡಿಯದಿರುವ ಶಾಸಕ ಸ್ಥಳೀಯ ಶಾಸಕ ಶಿವರಾಮ್ ಹೆಬ್ಬಾರ್ ನಡೆ ಅವರಿಗೆ ಶೋಭೆಯಲ್ಲ. ಧೈರ್ಯವಿದ್ದರೆ ಅವರು ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ’ ಎಂದು ಸವಾಲು ಹಾಕಿದರು.
ಯಾರು? ಏನಂದರು?
ಬಿಜೆಪಿ ರೈತಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ನವೀನಕುಮಾರ್ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. `ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಿದ್ರಾವಸ್ಥೆಯಲ್ಲಿದೆ. ರೈತರು ಸಂಕಷ್ಟದಲ್ಲಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ’ ಎಂದವರು ದೂರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಮಾತನಾಡಿ `ಅಡಕೆಗೆ ಕೊಳೆರೋಗ ಸೇರಿದಂತೆ ಇನ್ನಿತರ ರೋಗಗಳು ವ್ಯಾಪಕವಾಗಿ ಹರಡಿದ್ದರೂ ಅಧಿಕಾರಿಗಳು ಸರ್ಕಾರಕ್ಕೆ ವರದಿ ಮಾಡಿಲ್ಲ’ ಎಂದು ದೂರಿದರು. ರಾಜ್ಯ ಬಿಜೆಪಿ ಸಹವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ `ಕಾಂಗ್ರೆಸ್ ಯಾವತ್ತಿಗೂ ಜನವಿರೋಧಿ ಮತ್ತು ದೇಶವಿರೋಧಿ ಸರಕಾರವಾಗಿದೆ’ ಎಂದರು.
ಬಿಜೆಪಿ ಯಲ್ಲಾಪುರ ತಾಲೂಕು ಅಧ್ಯಕ್ಷ ಪ್ರಸಾದ ಹೆಗಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹರ್ತೆಬೈಲ್, ಪ್ರಮುಖರಾದ ಶಿವಾಜಿ ನರಸಾನಿ, ಭಾರತೀಯ ಕಿಸಾನ್ ಸಂಘದ ಶಿವರಾಮ ಗಾಂವ್ಕರ್, ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣ ಹೆಗಡೆ ಇತರರು ಇದ್ದರು. ಯಲ್ಲಾಪುರ ಬಸ್ ನಿಲ್ದಾಣದಿಂದ ದೇವಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ತಹಶೀಲ್ದಾರ್ ಕಚೇರಿಗೆ ಸಹಾಯಕ ಆಯುಕ್ತೆ ಕಾವ್ಯಾರಾಣಿ ಆಗಮಿಸಿ ಪ್ರತಿಭಟನಾಕಾರರ ಅಳಲು ಆಲಿಸಿದರು.




