ಅಕ್ರಮ ಮರಳುಗಾರಿಗೆ ದೂರಿನ ಅನ್ವಯ ಸ್ಥಳ ಪರಿಶೀಲನೆಗೆ ತೆರಳಿದ್ದ ಮೂವರು ಅಧಿಕಾರಿಗಳಿಗೆ ಆ ಭಾಗದ ಇಬ್ಬರು ದಿಗ್ಬಂದನ ಹಾಕಿದ್ದಾರೆ. ಚಪ್ಪಲಿಯಿಂದ ಹೊಡೆಯುವುದಾಗಿ ಬೆದರಿಸಿ ಅಧಿಕಾರಿಗಳ ಕೈ-ಬುಜ ಹಿಡಿದು ಎಳೆದಾಡಿದ್ದಾರೆ. ಇದಲ್ಲದೇ, ಅಕ್ರಮ ಮರಳುಗಾರಿಕೆ ದೂರು ನೀಡಿದ ಕಾರಣ ಸಾರ್ವಜನಿಕರೊಬ್ಬರಿಗೆ 30 ಜನ ಥಳಿಸಿದ್ದಾರೆ!
ಕುಮಟಾದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಮಿರ್ಜಾನ್ ಎತ್ತಿನಬೈಲಿನ ಮೋಹನ ಪಟಗಾರ ಗಣಿ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆ ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಂಜುನಾಥ ಶನಿಯಾರ ದೇವಾಡಿಗ ಪರಿಶೀಲನೆಗೆ ತೆರಳಿದ್ದರು. ತಮ್ಮೊಂದಿಗೆ ಗಣಿ ಇಲಾಖೆಯ ಕಿರಿಯ ಅಭಿಯಂತರ ಮಂಜುನಾಥ ತಿಮ್ಮಯ್ಯ ದೇವಾಡಿಗ ಹಾಗೂ ದಿವಿಗಿ ಪಿಡಿಓ ಚರಣ ಮರಾಠಿ ಅವರನ್ನು ಕರೆದೊಯ್ದಿದ್ದರು.
ಜನವರಿ 10ರಂದು ದಿವಿಗಿ ಗ್ರಾಮದ ಮಣಕೋಣದ ಬಳಿ ಅಕ್ರಮ ಮರಳುಗಾರಿಕೆ ನಡೆಯದಂತೆ ಅಧಿಕಾರಿಗಳೆಲ್ಲರೂ ಸೇರಿ ಟ್ರೆಚ್ ನಿರ್ಮಾಣ ಮಾಡುತ್ತಿದ್ದರು. ಆ ವೇಳೆ ಅಲ್ಲಿಗೆ ಬಂದ ಮೂರುರಿನ ಶ್ರೀಧರ ಹೆಗಡೆ ಹಾಗೂ ವಿನಾಯಕ ದೇಶಭಂಡಾರಿ ಅಧಿಕಾರಿಗಳನ್ನು ತಡೆದರು. `ಟ್ರೆಂಚ್ ಕಾಮಗಾರಿ ಮುಂದುವರೆಸಿದರೆ ಚಪ್ಪಲಿಯಿಂದ ಹೊಡೆಯುವೆ’ ಎಂದು ಬೆದರಿಸಿದರು. ಅಧಿಕಾರಿಗಳನ್ನು ಅಡ್ಡಗಟ್ಟಿ ಅವರ ಕೈ ಹಿಡಿದು ಎಳೆದರು. ಆ ಸ್ಥಳದಿಂದ ಬೇರೆ ಕಡೆ ಹೋಗಿ ತಪ್ಪಿಸಿಕೊಳ್ಳಲು ಆಗದಂತೆ ಅಡ್ಡಗಟ್ಟಿ ನಿಂದಿಸಿದರು. ವಿಡಿಯೋ ಮಾಡುತ್ತಿದ್ದವರ ಮೊಬೈಲನ್ನು ಕಿತ್ತುಕೊಂಡರು. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಂಜುನಾಥ ಶನಿಯಾರ ದೇವಾಡಿಗ ಮೇಲಧಿಕಾರಿಗಳಿಗೆ ದೂರು ನೀಡಿ, ಇದೀಗ ಪೊಲೀಸ್ ಪ್ರಕರಣ ದಾಖಲಿಸಿದರು.
ದೂರುದಾರನ ಮನೆ ಮೇಲೆ ದುಷ್ಕರ್ಮಿಗಳ ದಾಳಿ!
ಅಕ್ರಮ ಮರಳುಗಾರಿಕೆಯ ಬಗ್ಗೆ ಮಿರ್ಜಾನ್ ಎತ್ತಿನಬೈಲ್ ಮೋಹನ ಪಟಗಾರ ಗಣಿ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆ 30 ಜನ ಅವರ ಮನೆ ಮೇಲೆ ದಾಳಿ ನಡೆಸಿದರು.
ಮೂರುರಿನ ಶ್ರೀಧರ ಹೆಗಡೆ ಹಾಗೂ ವಿನಾಯಕ ದೇಶಬಂಡಾರಿ ಜೊತೆ ತಂಡ್ರಕುಳಿಯ ಗಣಪತಿ ಅಂಬಿಗ, ದುಂಡಕುಳಿಯ ಗೋಪಾಲ ಗೌಡ, ಮಿರ್ಜಾನಿನ ಜಗದೀಶ ಗಿರಿಯನ್, ಪಾಂಡು ಅಂಬಿಗ, ಸಚೀನ್ ದೇಶಭಂಡಾರಿ, ಸಂದೀಪ ದೇಶಭಂಢಾರಿ, ಭಾಸ್ಕರ್ ಅಂಬಿಗ, ಮತಂಡ್ರಕುಳಿ ರಾಜು ಸೋಮಯ್ಯ ಅಂಬಿಗ, ದಿವಗಿಯ ರಮೇಶ ಅಂಬಿಗ, ದಿವಿಗಿಯ ನಿತ್ಯ ಜಾನಪ್ಪ ಅಂಬಿಗ, ಸಂಗೀತ ದೇಶಬಂಢಾರಿ, ತಂಡ್ರಕುಳಿಯ ಮಂಜು ಅಂಬಿಗ ಈ ದಾಳಿಯಲ್ಲಿದ್ದರು.
`ಅಘನಾಶಿನಿ ನದಿಯಲ್ಲಿ ಮರಳುಗಾರಿಕೆ ನಡೆಸುವ ಬಗ್ಗೆ ಮಾಹಿತಿ ನೀಡಿದರೆ ಹುಷಾರ್’ ಎಂದು ಅವರೆಲ್ಲರೂ ಬೆದರಿಕೆ ಹಾಕಿದರು. ಕೈಯಲ್ಲಿದ್ದ ದೊಣ್ಣೆ, ಕೋಲುಗಳಿಂದ ಮೋಹನ ಪಟಗಾರರ ಮೇಲೆ ದಾಳಿ ಮಾಡಿದರು. ಅಲ್ಲಿದ್ದ ನಾಲ್ವರು `ಇಲ್ಲಿಗೆ ನಿನ್ನನ್ನು ಬಿಡುವುದಿಲ್ಲ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾದರು. `ಮತ್ತೊಮ್ಮೆ ದೂರು ನೀಡಬೇಡ’ ಎಂದು ಕೆಲವರು ಎಚ್ಚರಿಕೆ ನೀಡಿದರು. ಇದರಿಂದ ಬೆದರಿದ ಮೋಹನ ಪಟಗಾರ ಇದೀಗ ಪೊಲೀಸ್ ದೂರು ನೀಡಿ ರಕ್ಷಣೆ ಕೋರಿದ್ದಾರೆ.




