ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದದಲ್ಲಿ 42 ಲಕ್ಷ ರೂ ಅವ್ಯವಹಾರ ನಡೆದಿದೆ. ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕನೇ ನಕಲಿ ದಾಖಲೆ ಸೃಷ್ಠಿಸಿ 42 ಲಕ್ಷ ರೂ ಎಗರಿಸಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪ್ರಧಾನ ಕಚೇರಿ ಹೊಂದಿದೆ. 17 ಕಡೆ ಈ ಸಂಘ ಶಾಖೆಯನ್ನು ಹೊಂದಿದೆ. ಉದ್ದಿಮೆದಾರ ಜಿ ಜಿ ಶಂಕರ್ ಅವರು ಈ ಸಂಘದ ಅಧ್ಯಕ್ಷರಾಗಿದ್ದಾರೆ. ಹಲವು ನಿವೃತ್ತ ಅಧಿಕಾರಿಗಳು, ಗುತ್ತಿಗೆದಾರರು, ನಿವೃತ್ತ ಬ್ಯಾಂಕ್ ಉದ್ಯೋಗಿಗಳು ನಿರ್ದೇಶಕ ಸ್ಥಾನದಲ್ಲಿದ್ದಾರೆ. ಠೇವಣಿದಾರರಿಗೆ ಈ ಸಹಕಾರಿ ನಿಯಮಿತ ಆಕರ್ಷಕ ಬಡ್ಡಿ ನೀಡುತ್ತಿದೆ. ಸಾಲಗಾರರಿಗೆ ಸಹ ಸ್ಪರ್ಧಾತ್ಮಕ ದರದ ಬಡ್ಡಿ ವಿಧಿಸುತ್ತಿದೆ. ಹೀಗಾಗಿ ಕಚೇರಿ ದಾಖಲೆಗಳ ಪ್ರಕಾರ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ಉತ್ತಮ ಲಾಭವನ್ನು ಪಡೆಯುತ್ತಿದೆ.
ಅದಾಗಿಯೂ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಕುಮಟಾ ಶಾಖೆಯಲ್ಲಿ ಈ ಅವ್ಯವಹಾರ ನಡೆದಿದೆ. 2018-19ನೇ ಸಾಲಿನಲ್ಲಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದರೂ ಇದೀಗ ಆ ಬಗ್ಗೆ ಬ್ಯಾಂಕಿನವರು ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಚಿತ್ರಗಿಯ ವಿನಾಯಕ ನಾಯ್ಕ ಎಂಬಾತರು ಕುಮಟಾದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ಪ್ರಭಾರಿ ಶಾಖಾ ವ್ಯವಸ್ಥಾಪಕರಾಗಿದ್ದರು. 2018ರ ಏಪ್ರಿಲ್ 1ರಿಂದ 2019ರ ಅಗಸ್ಟ 13ರ ಅವಧಿಯಲ್ಲಿ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ.
ವಿನಾಯಕ ನಾಯ್ಕ ಅವರು ಈ ಸಂಘದಲ್ಲಿ ಠೇವಣಿ ಹಣವಿರಿಸಿದವರಿಗೆ ನಕಲಿ ಪ್ರಮಾಣ ಪತ್ರ ನೀಡಿ ಆ ಹಣವನ್ನು ಸ್ವಂತ ಬಳಕೆಗೆ ಉಪಯೋಗಿಸಿಕೊಂಡಿದ್ದಾರೆ. ಪೋರ್ಜರಿ ಸಹಿಗಳ ಮೂಲಕ ಅವರು ಬ್ಯಾಂಕಿಗೆ ವಂಚಿಸಿದ್ದಾರೆ. 42 ಲಕ್ಷ ರೂ ಲಪಟಾಯಿಸಿದ ನಂತರ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಬಗ್ಗೆ ಸಂಘದ ಆಡಳಿತ ಮಂಡಳಿಯವರು ಚರ್ಚೆ ನಡೆಸಿ, ಕೊನೆಗೆ ಇದೀಗ ಪೊಲೀಸ್ ದೂರು ನೀಡಿದ್ದಾರೆ. ಸೇಫ್ ಸ್ಟಾರ್ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ ಶೆಟ್ಟಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
`ಸೊಸೈಟಿ ಉದ್ಯೋಗಿಯಿಂದ ಅವ್ಯವಹಾರ ನಡೆದಿದ್ದರೂ ಠೇವಣಿದಾರರಿಗೆ ಆತಂಕವಿಲ್ಲ. ಆರ್ಥಿಕವಾಗಿ ಶಿಸ್ತು ಕಾಪಾಡಲು ಹಲವು ಕ್ರಮ ಜರುಗಿಸಿದ್ದು, ನಷ್ಠವಾದವರಿಗೆ ನ್ಯಾಯ ಕೊಡಿಸುವುದು ಸೊಸೈಟಿಯ ಜವಾಬ್ದಾರಿ’ ಎಂದು ಆಡಳಿತ ಮಂಡಳಿ ತಿಳಿಸಿದೆ.



