ಕುಡಿಯುವ ನೀರಿಗೆ ಚರಂಡಿ ತ್ಯಾಜ್ಯ ಮಿಶ್ರಣವಾದ ಕಾರಣ ಎಂಟು ಜನ ವಾಂತಿ ಬೇದಿಯಿಂದ ತತ್ತರಿಸಿದ್ದಾರೆ. ಅಸ್ವಸ್ಥರಾದ ಎಲ್ಲರಿಗೂ ಮುಂಡಗೋಡಿನ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಆರೈಕೆ ಮಾಡುತ್ತಿದ್ದಾರೆ.
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮಕ್ಕೆ ಇಂದೂರು ಗ್ರಾಮ ಪಂಚಾಯತದಿ0ದ ನಲ್ಲಿ ಮೂಲಕ ನೀರು ಸರಬರಾಜು ಆಗುತ್ತದೆ. ನೀರು ಪೂರೈಕೆಯ ಪೈಪುಗಳು ತ್ಯಾಜ್ಯ ಹರಿಯುವ ಚರಂಡಿಯ ಮೂಲಕವೇ ಹಾದು ಹೋಗಿದ್ದು, ಚರಂಡಿಯ ಕೊಳಚೆ ಕುಡಿಯುವ ನೀರಿನೊಂದಿಗೆ ಮಿಶ್ರಣವಾದ ಅನುಮಾನ ವ್ಯಕ್ತವಾಗಿದೆ. ಈ ನೀರು ಸೇವಿಸಿದ ಪರಿಣಾಮ ಕೊಪ್ಪ ಬಳಿಯ 8 ಜನ ಅಸ್ವಸ್ಥರಾಗಿದ್ದಾರೆ.
ಜನವರಿ 25ರಂದು ಹೊಟ್ಟೆನೋವಿನಿಂದ ಬಳಲಿದ ಅವರೆಲ್ಲರೂ ಮರುದಿನ ವಾಂತಿ-ಬೇದಿಯಿAದ ತತ್ತರಿಸಿದರು. ಹೀಗಾಗಿ ಕೂಡಲೇ ಅವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಉನ್ನೂ ಅರಶಿನಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದವರು ಊರಿಗೆ ಭೇಟಿ ನೀಡಿ ಉಳಿದವರ ಆರೋಗ್ಯ ವಿಚಾರಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಕಾದಾರಿಸಿದ ನೀರನ್ನು ಮಾತ್ರ ಕುಡಿಯುವಂತೆ ಅರಿವು ಮೂಡಿಸಿದ್ದಾರೆ. ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಆರೋಗ್ಯಾಧಿಕಾರಿ ಸಹ ಸಲಹೆ ನೀಡಿದ್ದಾರೆ.
ನಲ್ಲಿಯಿಂದ ಬರುವ ನೀರಿನ ಮಾದರಿಯನ್ನು ವೈದ್ಯರು ಸಂಗ್ರಹಿಸಿದ್ದು, ಪರೀಕ್ಷೆಗೆ ರವಾನಿಸಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯತ ಅಧಿಕಾರಿಗೆ ಸಹ ಪರ್ಯಾಯ ನೀರು ಪೂರೈಸುವಂತೆ ಹೇಳಿದ್ದಾರೆ. ಚರಂಡಿ ಸ್ವಚ್ಚತೆಗೆ ಒತ್ತು ನೀಡುವಂತೆಯೂ ಸೂಚಿಸಲಾಗಿದೆ. ನೀರು ಸಂಗ್ರಹಣಾ ಘಟಕದ ಸ್ವಚ್ಛತೆಯ ಬಗ್ಗೆಯೂ ಗ್ರಾಮ ಪಂಚಾಯತಗೆ ವೈದ್ಯಾಧಿಕಾರಿಗಳು ಸೂಚಿಸಿದ್ದಾರೆ.



