ವನ್ಯಜೀವಿ ಆಕ್ರಮಣ ಭೀತಿ, ವಿಪರೀತ ಸೊಳ್ಳೆ ಕಾಟದ ನಡುವೆಯೂ ಮುರುಡೇಶ್ವರದ ಬೈಲೂರು ತಿರುವಿನ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಫೆಬ್ರವರಿ 2ರ ರಾತ್ರಿ 8.30ಕ್ಕೆ ಜಟ್ಟಪ್ಪ ನಾಯ್ಕ ಎಂಬಾತರು ಬೈಲೂರು ಅರಣ್ಯ ಪ್ರವೇಶಿಸಿದ್ದರು. ಅವರ ಜೊತೆ ಹೋದ ವಸಂತ ಹರಿಕಂತ ಹಾಗೂ ದುರ್ಗಯ್ಯ ನಾಯ್ಕ ಸೇರಿ ಕಾಡಿನ ನಡುವೆ ತಾಡಪಲ್ ಹಾಸಿಕೊಂಡಿದ್ದರು. ಅದರ ಮೇಲೆ ಇಸ್ಪಿಟ್ ಎಲೆಗಳನ್ನು ಹಿಡಿದು ಅಂದರ್ ಬಾಹರ್ ಆಡುತ್ತಿದ್ದರು. 3200ರೂ ಹಣವನ್ನು ಇಸ್ಪಿಟ್ ಎಲೆಗಳ ಜೊತೆ ಹರಡಿಕೊಂಡಿದ್ದರು.
ಕಾಡಿನ ಅಂಚಿನ ಪ್ರದೇಶದಲ್ಲಿ ಈ ಮೂವರು ಬೈಕ್ ನಿಲ್ಲಿಸಿ ಅರಣ್ಯದೊಳಗೆ ಪ್ರವೇಶಿಸಿದ್ದರು. ಅನುಮಾನಾಸ್ಪದ ರೀತಿಯಲ್ಲಿ ಬೈಕ್ ನಿಂತಿರುವುದನ್ನು ಗಮನಿಸಿದ ಪೊಲೀಸರು ಕಾಡಿನ ಒಳಗೆ ದಾಳಿ ಮಾಡಿದರು. ಮುರುಡೇಶ್ವರ ಠಾಣೆಯ ಪಿಎಸ್‌ಐ ಹಣಮಂತ ಬೀರಾದರ ಅವರನ್ನು ನೋಡಿದ ತಕ್ಷಣ ದೊಡ್ಡಬೆಲ್ಸೆಯ ವಸಂತ ಹರಿಕಂತ ಹಾಗೂ ಕಂಡಕದ ದುರ್ಗಯ್ಯ ನಾಯ್ಕ ಓಡಿ ಪರಾರಿಯಾದರು. ಪೊಲೀಸ್ ಸಿಬ್ಬಂದಿ ಸಂಗಪ್ಪ, ವಿನಾಯಕ, ವಿಜಯ ಹಾಗೂ ಯೋಗೇಶ ಸೇರಿ ಜಟ್ಟಪ್ಪ ನಾಯ್ಕ ಅವರನ್ನು ಹಿಡಿದುಕೊಂಡರು.
ಅಲ್ಲಿದ್ದ ತಾಡಪತ್ರೆ, ಇಸ್ಪಿಟ್ ಎಲೆ, ಹಣದ ಜೊತೆ ಮೂವರ ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದರು. ಕಾನೂನುಬಾಹಿರ ಜೂಜಾಟ ತಡೆದ ಸಿಬ್ಬಂದಿ ಶ್ರಮಕ್ಕೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ, ಡಿವೈಎಸ್‌ಪಿ ಮಹೇಶ ಹಾಗೂ ಸಿಪಿಐ ಸಂತೋಷ ಕಾಯ್ಕಿಣಿ ಮೆಚ್ಚುಗೆವ್ಯಕ್ತಪಡಿಸಿದರು.