`ಶಿರಸಿ ಶಾಸಕ ಭೀಮಣ್ಣ ನಾಯ್ಕ ಪದೇ ಪದೇ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ದೂರಿದ್ದಾರೆ. `ರಾಜ್ಯದ 224 ಶಾಸಕರ ಪೈಕಿ ಭೀಮಣ್ಣ ನಾಯ್ಕ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕರಾಗಿದ್ದಾರೆ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಇಂದಿರಾ ಕ್ಯಾಂಟೀನ್ ವಿಷಯವಾಗಿ ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ದಾಖಲೆಪಡೆದು ಪರಿಶೀಲಿಸಿದಾಗ ಭೀಮಣ್ಣ ನಾಯ್ಕ ಅವರು ಹೇಳಿದ ಸುಳ್ಳುಗಳು ಬಹಿರಂಗವಾಗಿರುವುದಾಗಿಯೂ ಅನಂತಮೂರ್ತಿ ಹೆಗಡೆ ಹೇಳಿಕೊಂಡಿದ್ದಾರೆ.
`ಹೈಟೆಕ್ ಆಸ್ಪತ್ರೆಯ ಎಂಆರ್‌ಐ ಹಾಗೂ ಸಿಟಿ ಸ್ಕಾನ್ ಯಂತ್ರ, ಟ್ರಾಮಾ ಸೆಂಟರ್ ಹಾಗೂ ಹೃದಯ ಚಿಕಿತ್ಸೆಯ ಸಾಮಗ್ರಿಗಳ ಉಪಕರಣ ವಿಷಯದಲ್ಲಿಯೂ ಹಗರಣವಾಗಿದೆ. ತಾವು ಸೂಚಿಸಿದ ರೀತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದ ಆಸ್ಪತ್ರೆ ಆಡಳಿತಾಧಿಕಾರಿಗಳನ್ನು ವರ್ಗಾವಣೆ ಮಾಡಿಸುವಲ್ಲಿ ಶಾಸಕರು ಮುತುವರ್ಜಿವಹಿಸಿದ್ದಾರೆ. ಆಡಳಿತಾಧಿಕಾರಿ ಬದಲಾವಣೆಯಲ್ಲಿ ತೋರಿಸಿದ ಆಸಕ್ತಿಯನ್ನು ಅಭಿವೃದ್ಧಿ ವಿಷಯದಲ್ಲಿ ತೋರಿಸಿಲ್ಲ’ ಎಂದು ಅನಂತಮೂರ್ತಿ ಹೆಗಡೆ ದೂರಿದ್ದಾರೆ.
`ಆಸ್ಪತ್ರೆಯ ಆಡಳಿತಾಧಿಕಾರಿ ಬದಲಾವಣೆ ನಂತರ ತಮಗೆ ಬೇಕಾದವರಿಂದ ವೈದ್ಯಕೀಯ ಉಪಕರಣಗಳಿಗಾಗಿ 5.20 ಕೋಟಿ ರೂಪಾಯಿಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆಸ್ಪತ್ರೆಯಲ್ಲಿನ ಗೊಂದಲ ಬಗೆಹರಿಸುವಂತೆ ಎರಡು ಬಾರಿ ಒತ್ತಾಯಿಸಿದರೂ ಆ ವೇಳೆ ಶಾಸಕರು ಮಾತನಾಡಿಲ್ಲ. ಸಾಮಗ್ರಿಗಾಗಿ ಸಹ ಈವರೆಗೂ ಟೆಂಡರ್ ಕರೆದಿಲ್ಲ ಎಂಬ ಸತ್ಯ ದಾಖಲೆಗಳಿಂದ ಬಹಿರಂಗವಾಗಿದೆ’ ಎಂದವರು ವಿವರಿಸಿದ್ದಾರೆ. `ಟೆಂಡರ್ ಕರೆಯದೇ ಇರುವುದಕ್ಕೆ ಕಾರಣ, ವೈದ್ಯರ ನೇಮಕಾತಿ ವಿಷಯದಲ್ಲಿನ ಗೊಂದಲ ಬಗೆಹರಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ಶಾಸಕ ಭೀಮಣ್ಣ ನಾಯ್ಕ ಅವರು ಈಗಲಾದರೂ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಬಳಿ ತೆರಳಿ ಹಿಂದಿನ ಸರ್ಕಾರದ ರೂಪುರೇಷೆ ಪ್ರಕಾರ ಆಸ್ಪತ್ರೆ ನಿರ್ಮಿಸಬೇಕು. ಫೆ 20ರ ಒಳಗೆ ಈ ಕೆಲಸ ಮಾಡದೇ ಇದ್ದರೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯ’ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ.