ರೈಲ್ವೆ ಹಳಿಗಳ ಅಂಚಿನಲ್ಲಿ ಓಡಾಡುವಾಗ ಕಾಲಿಗೆ ಕಬ್ಬಿಣ ತಾಗಿ ಗಾಯಗೊಂಡಿದ್ದ ನಾಗರಾಜ ಪೂಜಾರಿ ಎಂಬಾತ `ಆಸ್ಪತ್ರೆಗೆ ಹೋದರೆ ಕಾಲು ತುಂಡರಿಸುತ್ತಾರೆ’ ಎಂಬ ಆತಂಕದಲ್ಲಿ ಊರೂರು ಅಲೆದಾಡುತ್ತಿದ್ದು, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರ ಮನವೊಲೈಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಂದಾಪುರ ಮೂಲಕ ನಾಗರಾಜ ಪೂಜಾರಿಗೆ ಅಪ್ಪ-ಅಮ್ಮ ಯಾರೂ ಇಲ್ಲ. ಸಂಬoಧಿಕರು ಸಹ ಹತ್ತಿರವಿಲ್ಲ. ದುಡಿಯುವುದಕ್ಕಾಗಿ ಮುಂಬೈಗೆ ಹೋಗಿದ್ದ ನಾಗರಾಜ ಪೂಜಾರಿ ರೈಲ್ವೆ ಹಳಿ ಬಳಿ ನಡೆದು ಹೋಗುವಾಗ ಕಬ್ಬಿಣದ ರಾಡು ತಾಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಆ ರಾಡು ಎಲುಬಿನವರೆಗೆ ಹೋಗಿದ್ದು, ಇದಕ್ಕಾಗಿ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಕೊಂಚ ಚೇತರಿಸಿಕೊಂಡ ನಂತರ ಅಲ್ಲಿಂದ ಪರಾರಿಯಾಗಿ ಭಟ್ಕಳಕ್ಕೆ ಬಂದರು. ಮತ್ತೆ ನೋವು ಕಾಣಿಸಿಕೊಂಡ ಹಿನ್ನಲೆ ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಾದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ಹೋಗುವಂತೆ ತಿಳಿಸಿದ ಕಾರಣ 15 ದಿನಗಳ ಹಿಂದೆಯೇ ಕಾರವಾರಕ್ಕೆ ಆಗಮಿಸಿದ್ದರು. ಆದರೆ, ಆಸ್ಪತ್ರೆಗೆ ಹೋಗಲು ಅವರಿಗೆ ಧೈರ್ಯ ಸಾಲಲಿಲ್ಲ.
ಹೀಗಾಗಿ ಕಾರವಾರದ ಬೀದಿ ಬೀದಿಗಳಲ್ಲಿ ಅಡ್ಡಾಡುತ್ತಿದ್ದರು. ಪೆಟ್ರೋಲ್ ಬಂಕ್ ಮಾಲಕ ಕೃಷ್ಣ ಕೆಳಸ್ಕರ್ ಈ ಬಗ್ಗೆ ಮಾಧವ ನಾಯಕರಿಗೆ ಫೋನ್ ಮಾಡಿದರು. ಮಾಧವ ನಾಯಕರು ಬರುವಷ್ಟರಲ್ಲಿ ನಾಗರಾಜ ಪೂಜಾರಿ ಅಲ್ಲಿಂದಲೂ ಕಾಲ್ಕಿತ್ತಿದ್ದರು. ಸತತ 4 ಬಾರಿ ನಾಗರಾಜ ಪೂಜಾರಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರೂ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದರು.
ಮಂಗಳವಾರ ಬಸ್ ನಿಲ್ದಾಣದ ಬಳಿ ನಾಗರಾಜ ಪೂಜಾರಿ ಮಲಗಿರುವ ವಿಷಯ ತಿಳಿದು ಮಾಧವ ನಾಯಕ ಹಾಗೂ ನಿತ್ಯಾನಂದ ನಾಯ್ಕ ಅಲ್ಲಿಗೆ ಹೋದರು. ಆದರೆ, ನಾಗರಾಜ ಪೂಜಾರಿ ಆಗಲೇ ಅಲ್ಲಿಂದ ಮುಂದೆ ಸಂಚರಿಸಿದ್ದರು. ಕೋರ್ಟ ಸರ್ಕಲ್ ಬಳಿ ಮಲಗಿದ್ದ ಅವರನ್ನು ಎಬ್ಬಿಸಿ ಪೂರ್ವಾಪರ ವಿಚಾರಿಸಿದರು. ಅದಾದ ನಂತರ ಖಾಸಗಿ ಆಂಬುಲೆನ್ಸ ನಡೆಸುವ ಮಂಜುನಾಥ ಅವರ ನೆರವುಪಡೆದು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ನಾಗರಾಜ ಪೂಜಾರಿ ಅವರ ಕಾಲಿನಲ್ಲಿ ಕೆಜಿ ಪ್ರಮಾಣದಲ್ಲಿ ಹುಳುಗಳಾಗಿದ್ದವು. ಅದನ್ನು ನೋಡಿ ವೈದ್ಯರೇ ಬೆಚ್ಚಿ ಬಿದ್ದರು. ಅವರ ಕಾಲಿನ ಗಾಯ ಸ್ವಚ್ಛಗೊಳಿಸಿದ ಡಾ ಆನಂದ ಅವರು ಇದೀಗ ಚಿಕಿತ್ಸೆ ನೀಡುತ್ತಿದ್ದಾರೆ. ಕಾಲು ತುಂಡರಿಸದೇ ಚಿಕಿತ್ಸೆ ಕೊಡಿಸಿದ ಕಾರಣ ನಾಗರಾಜ ಪೂಜಾರಿ ಅವರು `ಅನಾಥರ ಆಪತ್ಬಾಂದವ ಈ ಮಾಧವ’ ಎಂದು ಹೇಳಿ ಕೈ ಮುಗಿದರು.