ಖಾರದಪುಡಿ, ಮಚ್ಚು-ರಾಡುಗಳನ್ನು ಹಿಡಿದು ರಾತ್ರಿ ವೇಳೆ ಸಂಚರಿಸುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದುಷ್ಕೃತ್ಯದಲ್ಲಿ ತೊಡಗಿದ್ದ ಆರು ಜನರನ್ನು ಬಂಧಿಸಿದ್ದು, ತಪ್ಪಿಸಿಕೊಂಡ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.
ಸಿಕ್ಕಿಬಿದ್ದ ಎಲ್ಲರೂ ಹಗಲಿನಲ್ಲಿ ಪೇಂಟಿoಗ್, ಫರ್ನಿಚರ್, ಸೆಂಟ್ರಿoಗ್, ಮೊಬೈಲ್ ರಿಪೇರಿ ಹಾಗೂ ರಿಕ್ಷಾ ಓಡಿಸುವುದನ್ನು ಸೇರಿ ಸಮಾಜಮುಖಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ಖಾರದಪುಡಿ-ಬಡಿಗೆ ಹಿಡಿದು ರಸ್ತೆಯಲ್ಲಿ ಹೋಗುವವರನ್ನು ಬೆದರಿಸಿ ಹಣ-ಆಭರಣ ದೋಚುತ್ತಿದ್ದರು. 21 ಪೊಲೀಸ್ ತಂಡ ರಚಿಸಿ ಗಸ್ತು ಕಾರ್ಯಾಚರಣೆ ನಡೆಸುವ ಮೂಲಕ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಆರು ಡಕಾಯಿತರನ್ನು ವಶಕ್ಕೆ ಪಡೆದಿದ್ದಾರೆ.
ಜನವರಿ 4ರಂದು ಪಿಎಸ್‌ಐ ಹನುಮಂತ ಕುಡಗುಂಡಿ ತಮ್ಮ ತಂಡದೊoದಿಗೆ ಮುಂಡಗೋಡಿನಲ್ಲಿ ಸಂಚಾರ ನಡೆಸಿದ್ದರು. ರಾತ್ರಿಯಿಡಿ ಅವರು ಪೊಲೀಸ್ ಜೀಪ್ ಏರಿ ಚೌಡಳ್ಳಿ, ಕೂಸುರು, ಟಿಬೇಟಿಯನ್ ಕ್ಯಾಂಪ್, ಕೊಪ್ಪ, ಇಂದೂರು, ಹನಗುಂದ, ಅರಶಿಣಗೇರಿ ಕಡೆ ಸುತ್ತಾಟ ನಡೆಸಿದರು. ಬೆಳಗ್ಗೆ 5 ಗಂಟೆ ವೇಳೆಗೆ ಬಾಚಣಗಿ ಡ್ಯಾಮಿನ ಬಳಿ ಬಂದು ತಲುಪಿದರು. ಆಗ, ಅಲ್ಲಿ ಎಂಟು ಜನ ಕೈಯಲ್ಲಿ ಕಬ್ಬಿಣದ ರಾಡು, ಬಡಿಗೆ ಹಿಡಿದು ನಿಂತಿದ್ದರು. ಆ ಮಾರ್ಗವಾಗಿ ಸಂಚರಿಸುತ್ತಿದ್ದ ಎಲ್ಲರನ್ನು ನಿಲ್ಲಿಸಿ ಅವರ ಬಳಿಯಿದ್ದ ಆಭರಣ-ಹಣವನ್ನು ಕಿತ್ತುಕೊಳ್ಳುತ್ತಿದ್ದರು. ಕಣ್ಣಿಗೆ ಖಾರದಪುಡಿ ಎರಚಿ ದರೋಡೆ ಮಾಡುವ ಪ್ರಯತ್ನವನ್ನು ನಡೆಸಿದ್ದರು. ಪೊಲೀಸರ ವಾಹನವನ್ನು ಅವರು ಒಮ್ಮೆ ಬೆದರಿಸಿದ್ದರು.
ತಕ್ಷಣ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡ ಪಿಎಸ್‌ಐ ಹನುಮಂತ ಕುಡಗುಂಡಿ ಅಲ್ಲಿದ್ದ 8 ಜನರ ಪೈಕಿ ಆರು ಜನರನ್ನು ವಶಕ್ಕೆ ಪಡೆದರು. ಮುಂಡಗೋಡ ಇಂದಿರಾನಗರದಲ್ಲಿ ಪೇಂಟಿoಗ್ ಕೆಲಸ ಮಾಡುವ ಮಹಮದ್ ಗಾಜಿಪೂರ (24), ಆನಂದನಗರದಲ್ಲಿ ಸೆಂಟ್ರೀoಗ್ ಕೆಲಸ ಮಾಡುವ ವಾಸೀಂಖಾನ್ ಬಂಡಿಗೇರಿ (30), ಯಲ್ಲಾಪುರ ರಸ್ತೆಯ ಆಟೋಚಾಲಕ ಮಕ್ಬುಲ್ ಯಳ್ಳೂರು (38), ಮೊಬೈಲ್ ಅಂಗಡಿ ನಡೆಸುವ ಬಸ್ಸಾಪುರದ ಮದುಸಿಂಗ ರಜಪೂತ್ (31) ಜೊತೆ ಕೋರಿಯರ್ ಕೆಲಸ ಮಾಡುವ ನಂದೀಶ್ವರನಗರದ ವೀರೇಶ ಹಲಗೂರು (27), ಫರ್ನಿಚರ್ ಕೆಲಸ ಮಾಡುವ ಮಂಜುನಾಥ ಹೊಟ್ಕರ್ (26) ಸಿಕ್ಕಿಬಿದ್ದರು. ಇನ್ನಿಬ್ಬರು ಓಡಿ ಪರಾರಿಯಾದರು.
ರಾತ್ರಿ ಸಂಚರಿಸುವಾಗ ಇರಲಿ ಜಾಗೃತಿ-ಒಂಟಿ ಪ್ರಯಾಣ ಅತ್ಯಂತ ಅಪಾಯಕಾರಿ



