ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಶಾಸಕರ ಬೆಂಬಲಿಗರು ಅನಂತಮೂರ್ತಿ ಹೆಗಡೆ ಅವರ ಪ್ರತಿಕೃತಿ ಹಾಗೂ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿಗರು ಅನಗತ್ಯವಾಗಿ ಹಾಲು ಕುಡಿಯುವ ಮಗುವಿಗೂ ಧಿಕ್ಕಾರ ಕೂಗಿದ್ದಾರೆ!
ವೈದ್ಯರ ಜೊತೆ ಒಪ್ಪಂದದ ಶಂಕೆ!
`ಶಾಸಕರ ಮೇಲೆ ಅಪನಂಬಿಕೆ ಬರುವ ರೀತಿ ಅನಂತಮೂರ್ತಿ ಹೆಗಡೆ ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಹೇಳಿದ್ದಾರೆ. `ಅನಂತಮೂರ್ತಿ ಹೆಗಡೆ ಚುನಾವಣೆಗೆ ಸ್ಪರ್ಧಿಸುವ ಇಂಗಿತದಿoದ ಹುಚ್ಚು ಹೇಳಿಕೆ ನೀಡುತ್ತಿದ್ದು, ಬಿಜೆಪಿಗರು ಅವರಿಗೆ ಕನಿಷ್ಟ ಗ್ರಾಮ ಪಂಚಾಯತ ಚುನಾವಣೆಗಾದರೂ ಅವಕಾಶ ಮಾಡಿಕೊಡಬೇಕು’ ಎಂದು ಪ್ರಸನ್ನ ಶೆಟ್ಟಿ ಆಗ್ರಹಿಸಿದ್ದಾರೆ!
`ವೈದ್ಯ ಗಜಾನನ ಭಟ್ ಅವರ ವರ್ಗಾವಣೆ ಸರ್ಕಾರದ ಪ್ರಕ್ರಿಯೆ. ಆದರೆ, ಆಸ್ಪತ್ರೆ ಹೋರಾಟದ ವಿಷಯದಲ್ಲಿ ಅನಂತಮೂರ್ತಿ ಹೆಗಡೆ ನಡೆ ಗಮನಿಸಿದರೆ ಗಜಾನನ ಭಟ್ಟ ಅವರ ಜೊತೆ ಒಪ್ಪಂದ ನಡೆದಂತೆ ಭಾಸವಾಗುತ್ತದೆ’ ಎಂದು ಪ್ರಸನ್ನ ಶೆಟ್ಟಿ ಹೇಳಿದ್ದಾರೆ. `ಶಿರಸಿ ಹಳೆಯ ಬಸ್ ನಿಲ್ದಾಣದ ಕಾಮಗಾರಿ ನಡೆಯುವ ವೇಳೆಯಲ್ಲಿ ಸಹ ಕೆಲ ಎಡ ಬಿಡಂಗಿಗಳು ಅಪಪ್ರಚಾರ ನಡೆಸಿದ್ದರು. ಯಾವುದೇ ಅಡೆ-ತಡೆ ಇಲ್ಲದೇ ಕೆಲಸ ಮುಗಿದಿದೆ. ಆಸ್ಪತ್ರೆ ವಿಷಯದಲ್ಲಿ ಸಹ ಅನುಮಾನ ಬೇಡ’ ಎಂದು ಅವರು ಹೇಳಿದ್ದಾರೆ.
200ಕೋಟಿಗೂ ಅಧಿಕ ಅನುದಾನ!
`ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಒಂದುವರೆ ವರ್ಷದಲ್ಲಿ 200ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ. ಅದಾಗಿಯೂ ಅವರ ವಿರುದ್ಧ ಅನಂತಮೂರ್ತಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಹೇಳಿದ್ದಾರೆ. `ಶಾಸಕರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಮುಂದುವರೆಸಿದರೆ ಇನ್ನಷ್ಟು ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ.
ಹಾಲು ಕುಡಿಯುವ ಮಗುವಿಗೆ ಧಿಕ್ಕಾರ!
ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಅನಂತಮೂರ್ತಿ ಹೆಗಡೆ ಹೇಳಿಕೆ ಖಂಡಿಸಿ ಶಿರಸಿ ಇಳಸೂರು ಹಾಗೂ ದೊಡ್ನಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು `ಅನಂತಮೂರ್ತಿ ಹೆಗಡೆ ಹಾಲು ಕುಡಿಯುವ ಮಗು’ ಎಂದು ಮೊದಲಿಸಿದರು. `ಅನಂತಮೂರ್ತಿ ಹೆಗಡೆಗೆ ಧಿಕ್ಕಾರ’ ಎಂದು ಕೂಗಿದರು. ಅನಂತಮೂರ್ತಿ ಹೆಗಡೆ ಅವರ ಫೋಟೋ ಹಾಗೂ ಪೃತಿಕೃತಿಗೆ ಬೆಂಕಿ ಹಚ್ಚಿದರು. ಈ ವೇಳೆ `ಹಾಲು ಕುಡಿಯುವ ಮಗುವಿಗೆ ಧಿಕ್ಕಾರ’ ಎಂಬ ಧ್ವನಿಯೊಂದು ಕೇಳಿಸಿತು. `ಅನಂತಮೂರ್ತಿ ಹೆಗಡೆ ಅವರಿಗೆ ಹೋರಾಟ ಮಾಡುವ ಹಕ್ಕಿದೆ. ಆದರೆ, 30 ವರ್ಷದಿಂದ ಜನಸೇವೆ ಮಾಡುತ್ತಿರುವ ಭೀಮಣ್ಣ ನಾಯ್ಕ ವಿರುದ್ಧ ಆಧಾರರಹಿತ ಆರೋಪ ಮಾಡುವ ಹಕ್ಕು ಅವರಿಗಿಲ್ಲ’ ಎಂದು ಪ್ರತಿಭಟನಾಕಾರರು ಹೇಳಿದರು. `ಅನಂತಮೂರ್ತಿ ಹೆಗಡೆ ಕ್ಷಮೆ ಕೇಳುವವರೆಗೂ ಹೋರಾಟ ನಿರಂತರ’ ಎಂದು ಎಚ್ಚರಿಸಿದರು.
ಪೊಲೀಸರಿಗೆ ಪತ್ರ
`ರಾಜ್ಯದ 224 ಶಾಸಕರು ಸುಳ್ಳು ಹೇಳುವವರು ಎಂದು ಬಿಂಬಿಸಿದಲ್ಲದೇ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಹೆಚ್ಚಿನ ಸುಳ್ಳು ಹೇಳುವವರು’ ಎಂದು ಹೇಳಿಕೆ ನೀಡಿದ ಬಗ್ಗೆ ಆಕ್ಷೇಪಿಸಿ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಅನಂತಮೂರ್ತಿ ಹೆಗಡೆ ವಿರುದ್ಧ ಪೊಲೀಸರಿಗೆ ಪತ್ರ ಬರೆದಿದ್ದಾರೆ. `ಜನರಲ್ಲಿ ಗೊಂದಲ ಹುಟ್ಟಿಸಿ ದೊಂಬೆ ಎಬ್ಬಿಸುವ ಪ್ರಯತ್ನ ಈ ಹೇಳಿಕೆ ಹಿಂದೆ ಅಡಗಿದೆ’ ಎಂದವರು ದೂರಿದ್ದಾರೆ.