`ಶಿರೂರಿನಲ್ಲಿ ಮತ್ತೆ ಗುಡ್ಡ ಕುಸಿಯದಂತೆ ಎಚ್ಚರಿಕೆವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಹೆದ್ದಾರಿ ಪ್ರಾಧಿಕಾರದವರಿಗೆ ಸೂಚಿಸಿದ್ದಾರೆ. ಇದರೊಂದಿಗೆ ಯಲ್ಲಾಪುರದ ಅರಬೈಲ್ ಬಳಿ ನಡೆದ ಭೀಕರ ಅಪಘಾತವನ್ನು ನೆನಪಿಸಿಕೊಂಡ ಅವರು `ಹೆದ್ದಾರಿಯ ಉದ್ದಕ್ಕೂ ಮೊಬೈಲ್ ನೆಟ್‌ವರ್ಕ ಸಿಗುವಂತೆಯೂ ನೋಡಿಕೊಳ್ಳಬೇಕು’ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಹೇಳಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಸ್ತೆ ಸುರಕ್ಷಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. `ಶಿರೂರು ನಲ್ಲಿ ಈ ಮಳೆಗಾಲದ ಸಂದರ್ಭದಲ್ಲಿ ಪುನ: ಗುಡ್ಡ ಕುಸಿದು ಯಾವುದೇ ಅನಾಹುತವಾಗದಂತೆ ಕುರಿತಂತೆ ಜಿಎಸ್‌ಐ ಅಧಿಕಾರಿಗಳು ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ನಿಗಧಿಪಡಿಸಿದ ಅವಧಿಯೊಳಗೆ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸುವ ಕುರಿತಂತೆ ತಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಬಾಕಿ ಇರುವ ಅಗತ್ಯ ಅನುಮತಿಗಳನ್ನು ಪಡೆದು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕು’ ಎಂದು ಸೂಚಿಸಿದರು.
`ಗುರುತಿಸಲಾಗಿರುವ ಬ್ಲಾಕ್‌ಸ್ಪಾಟ್‌ಗಳ ಬಳಿ ತುರ್ತು ಸಂದರ್ಭದಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಲು ಅನುಕೂಲವಾಗುವಂತೆ ಮೊಬೈಲ್ ಟವರ್‌ಗಳನ್ನು ತಪ್ಪದೇ ಅಳವಡಿಸುವಂತೆ ಬಿ.ಎಸ್.ಎನ್.ಎಲ್. ಅಧಿಕಾರಿಗಳಿಗೆ ಸೂಚಿಸಿದರು. `ಯಲ್ಲಾಪುರ ಬಳಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಳುಗಳು ತಕ್ಷಣಕ್ಕೆ ಪೊಲೀಸ್‌ಗೆ ಸಂಪರ್ಕಿಸಲು ಅಥವಾ ಇತರೇ ಯಾರನ್ನೂ ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಸಿಗ್ನಲ್ ದೊರಕದ ಬಗ್ಗೆ ಪ್ರಸ್ತಾಪಿಸಿದರು. `ಬ್ಲಾಕ್ ಸ್ಪಾಟ್ ಸ್ಥಳಗಳಲ್ಲಿ ಅಪಘಾತ ಮುನ್ನೆಚರಿಕೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ಪ್ರದೇಶದಲ್ಲಿ ರಾತ್ರಿಯಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು ಮತ್ತು ತುರ್ತು ಸಹಾಯವಾಣಿ ಸಂಖ್ಯೆಗಳ ವಿವರಗಳನ್ನು ನಮೂದಿಸಿದ ಫಲಕಗಳನ್ನು ಅಳವಡಿಸುವಂತೆ ಹಾಗೂ ಆ ಪ್ರದೇಶಗಳನ್ನು ಅಪಘಾತ ರಹಿತವನ್ನಾಗಿ ಮಾಡಲು ಪೊಲೀಸ್ ಇಲಾಖೆ ಸೂಚಿಸುವ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾತನಾಡಿ `ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸ್ ಇಲಾಖೆ ಸೂಚಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಪೊಲೀಸ್ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಬೇಕು. ಜಿಲ್ಲೆಗೆ ಒಳ ಬರುವ ಮತ್ತು ಜಿಲ್ಲೆಯಿಂದ ಹೊರ ಹೋಗುವ ಎಲ್ಲಾ ಗಡಿ ಪ್ರದೇಶದಲ್ಲಿ ಸಿಸಿ ಟಿವಿ ಅಗತ್ಯವಿದ್ದು, ಅಗತ್ಯ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಿ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಹಾಗೂ ಪೊಲೀಸ್, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



