ಸಾಗವಾನಿ ಮರ ಕಡಿದು ದಾಸ್ತಾನು ಮಾಡುತ್ತಿದ್ದ ಮರಗಳ್ಳರನ್ನು ಅರಣ್ಯ ಸಿಬ್ಬಂದಿ ಸೋಮವಾರ ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಬಂಧಿತರಿoದ ಸಾಗವಾನಿ ನಾಟಾಗಳನ್ನು ಸಹ ಜಪ್ತು ಮಾಡಿದ್ದಾರೆ.
ಶಿರಸಿ ತಾಲೂಕಿನ ಶಿವಳ್ಳಿ ಗ್ರಾಮದ ಅರಣ್ಯದಲ್ಲಿ ಸಾಗವಾನಿ ಮರ ಕಟಾವು ನಡೆದ ಬಗ್ಗೆ ಉಪರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಅವರಿಗೆ ಮಾಹಿತಿ ಬಂದಿತ್ತು. ಈ ಹಿನ್ನಲೆ ಅವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಸ್ ನಿಂಗಾಣಿ ಹಾಗೂ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರು.
ಅಲ್ಲಿ ಬೋಪನಳ್ಳಿ ಬಳಿಯ ಕುದರೆಮನೆಯ ಮಂಜುನಾಥ ಮೊಗೇರ್ (39), ಕೃಷ್ಣ ಪಟಗಾರ (33) ಹಾಗೂ ದಾಸನಕೊಪ್ಪದ ಶಾಂತಪ್ಪ ತಳವಾರ (45) ಸಿಕ್ಕಿ ಬಿದ್ದರು. ಉಪವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೇಕರ್, ಗಸ್ತು ಅರಣ್ಯ ಪಾಲಕ ಮಲ್ಲಿಕಾರ್ಜುನ ಗುದಗಿ,ಭೋಜು ಚವ್ಹಾಣ, ಅರಣ್ಯ ಸಿಬ್ಬಂದಿ ಶ್ರೀಧರ ನಾಯ್ಕ ಹಾಗೂ ವಾಹನ ಚಾಲಕ ನವೀನ ನಾಯ್ಕ ಅವರನ್ನು ಹಿಡಿದರು.
ಸ್ಥಳದಲ್ಲಿ ಸಿಕ್ಕ 4 ಸಾಗವಾನಿ ತುಂಡುಗಳ ಜೊತೆ ಆರೋಪಿತರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವರದಿ ಸಲ್ಲಿಸಿದರು.