ಅತ್ಯಂತ ಅಪಾಯಕಾರಿ ರೀತಿಯಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡುವವರ ವಿರುದ್ಧ ಯಲ್ಲಾಪುರ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ತಮ್ಮ ಪ್ರತಿಭಟನೆ ಮುಂದುವರೆಸಿದ್ದಾರೆ. ಮoಗಳವಾರ ಪ ಪಂ ವಿಶೇಷ ಸಾಮಾನ್ಯ ಸಭೆ ನಡೆದಿದ್ದು, ಸಭೆ ಆರಂಭಕ್ಕೂ ಮುನ್ನ `ಅಕ್ರಮ ಮೀನು ಮಾರಾಟ ನಿಲ್ಲಿಸಬೇಕು’ ಎಂದು ಕೆಲ ಪ ಪಂ ಸದಸ್ಯರು ಪಟ್ಟು ಹಿಡಿದರು. ಈ ಹಿನ್ನಲೆ ಪ ಪಂ ಸಿಬ್ಬಂದಿ ಮೀನು ಮಾರಾಟ ತಡೆದರು.
`ಯಲ್ಲಾಪುರ ಪಟ್ಟಣದ ಜೋಡುಕೆರೆ, ತಟಗಾರ ಕ್ರಾಸ್ ಸೇರಿ ಅನೇಕ ಕಡೆ ಮೀನು ಮಾರಾಟ ನಡೆಯುತ್ತಿದೆ. ಮೀನು ಮಾರಾಟಕ್ಕಾಗಿ ಪ್ರತ್ಯೇಕ ಮಳಿಗೆ ನಿರ್ಮಿಸಿದರೂ ರಸ್ತೆ ಬದಿ ಮೀನು ಮಾರಾಟ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗ ಅತಿಕ್ರಮಣವಾಗಿದ್ದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಜೊತೆಗೆ ವಾಹನಗಳ ಅಪಘಾತವೂ ಹೆಚ್ಚಾಗಿದೆ’ ಎಂದು ಪ ಪಂ ಸದಸ್ಯರು ವಿವರಿಸಿದರು. ಸೋಮೇಶ್ವರ ನಾಯ್ಕ ಅವರ ಧರಣಿಗೆ ಪ ಪಂ ಸದಸ್ಯರಾದ ನಾಗರಾಜ ಅಂಕೋಲೇಕರ್, ಶ್ಯಾಮಲಿ ಪಾಠಣಕರ್, ಕಲ್ಪನಾ ನಾಯ್ಕ, ಆದಿತ್ಯ ಗುಡಿಗಾರ ಹಾಗೂ ಶ್ರೀನಿವಾಸ ಗಾಂವ್ಕರ್ ಧ್ವನಿಗೂಡಿಸಿದರು.
`ರಸ್ತೆ ಪಕ್ಕದ ಜಾಗ ಅತಿಕ್ರಮಿಸಿ ಮೀನು ಮಾರಾಟ ಮಾಡುವುದರಿಂದ ಇನ್ನೂ ಅನೇಕ ಸಮಸ್ಯೆಗಳು ಉದ್ಬವವಾಗಿದೆ. ಮೀನು ಮಾರಾಟ ಸ್ಥಳದ ತ್ಯಾಜ್ಯ ಸಮೀಪದ ಕೆರೆ ನೀರಿಗೆ ಮಿಶ್ರಣವಾಗುತ್ತಿದೆ. ಜೊತೆಗೆ ಅಲ್ಲಿನ ದೇವಾಲಯದ ವಾತಾವರಣ ಸಹ ಹಾಳಾಗುತ್ತಿದೆ. ಅನಧಿಕೃತ ಮೀನು ಮಾರಾಟ ಸ್ಥಳ ಸ್ವಚ್ಛತೆ ಇಲ್ಲದ ಕಾರಣ ಆ ಪ್ರದೇಶ ಗಬ್ಬೆದ್ದಿದ್ದು, ರೋಗ ಹರಡುವ ಆತಂಕವಿದೆ’ ಎಂದು ಅಧಿಕಾರಿಗಳ ಬಳಿ ವಿವರಿಸಿದರು.
ಈ ಹಿನ್ನಲೆ ಸಭೆಯ ಅಜೆಂಡಾ ಓದುವ ಮುನ್ನ ಅಧಿಕಾರಿಗಳು ಅಕ್ರಮ ಮೀನು ಮಾರಾಟ ಪ್ರದೇಶಕ್ಕೆ ತಮ್ಮ ಸಿಬ್ಬಂದಿ ಕಳುಹಿಸಿಕೊಟ್ಟರು. ಅಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿದ್ದವರನ್ನು ಒಕ್ಕಲೆಬ್ಬಿಸಿದರು. ಈ ಬಗ್ಗೆ ಫೋಟೋ-ವಿಡಿಯೋವನ್ನು ಸಭೆಯಲ್ಲಿ ಪ್ರದರ್ಶಿಸಿದ ನಂತರ ಮುಂದಿನ ವಿಷಯದ ಕುರಿತು ಚರ್ಚೆ ನಡೆಯಿತು. ಆದರೂ, ಅಕ್ರಮ ಮೀನು ಮಾರಾಟಕ್ಕೆ ಶಾಶ್ವತವಾಗಿ ತಡೆಯೊಡ್ಡಬೇಕು ಎಂದು ಪಟ್ಟು ಹಿಡಿದವರ ಆಕ್ರೋಶ ಕಡಿಮೆ ಆಗಲಿಲ್ಲ.
`ಈ ದಿನ ಅಕ್ರಮ ಮೀನು ಮಾರಾಟವನ್ನು ಪಟ್ಟಣ ಪಂಚಾಯತ ತಡೆದಿದೆ. ಇದು ಮತ್ತೆ ಮರುಕಳಿಸಿದರೆ ಪಟ್ಟಣ ಪಂಚಾಯತ ಕಚೇರಿ ಎದುರು ಮೀನು ಮಾರಾಟ ನಡೆಸಿ ಪ್ರತಿಭಟಿಸುವುದು ಖಚಿತ’ ಎಂದು ಸೋಮೇಶ್ವರ ನಾಯ್ಕ ಎಚ್ಚರಿಸಿದರು.