ಕೃಷಿಕರೊಬ್ಬರು ಕಷ್ಟಪಟ್ಟು ಬೆಳೆಸಿದ್ದ 1000ಕ್ಕೂ ಅಧಿಕ ಅಡಿಕೆ ಮರಗಳು ಬೆಂಕಿಗೆ ಆಹುತಿಯಾಗಿದೆ. ಅಡಿಕೆ ಮರದ ನಡುವೆಯಿದ್ದ ಬಾಳೆ ಗಿಡಗಳು ಸಹ ಸುಟ್ಟು ಕರಕಲಾಗಿದೆ.
ಸಿದ್ದಾಪುರದ ಕಂಚಿಕೈ ಗ್ರಾಮದಲ್ಲಿ ಗಣಪತಿ ಹೆಗಡೆ ಎಂಬಾತರು ಎರಡು ಎಕರೆ ಕ್ಷೇತ್ರದಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಮೂರು ವರ್ಷಗಳ ಕಾಲ ಅವುಗಳನ್ನು ಜೋಪಾನ ಮಾಡಿದ್ದರು. ಅಡಿಕೆ ಗಿಡಗಳಿಗೆ ನೀರು-ಗೊಬ್ಬರ ಉಣಿಸಿ ಕಾಳಜಿಯಿಂದ ನೋಡಿಕೊಂಡಿದ್ದರು.
ಆದರೆ, ಮಂಗಳವಾರ ಏಕಾಏಕಿ ಬೆಂಕಿ ಹೊತ್ತಿಕೊಂಡು ಪೂರ್ತಿ ತೋಟ ಕೆಂಪು ಕೆಂಪಾಯಿತು. ನೀರು ಬಿಟ್ಟು ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಎಲ್ಲಾ ಅಡಿಕೆ ಮರಗಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನೆರಡು ವರ್ಷಕ್ಕೆ ಫಸಲು ನೀಡಬೇಕಿದ್ದ ಅಡಿಕೆ ಮರಗಳು ಸಾವನಪ್ಪಿದ್ದರಿಂದ ಗಣಪತಿ ಹೆಗಡೆ ಅವರು ಕಂಗಾಲಾದರು. ಈ ಅವಘಡದಿಂದ ಅವರು ಲಕ್ಷಕ್ಕೂ ಅಧಿಕ ರೂ ಹಾನಿ ಅನುಭವಿಸಿದರು. ಶಾಸಕ ಭೀಮಣ್ಣ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವಘಡಕ್ಕೆ ಕಾರಣ ಗೊತ್ತಾಗಿಲ್ಲ.