ಆನ್‌ಲೈನ್ ಟ್ರೆಡಿಂಗ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಿವೃತ್ತ ಸೈನಿಕ ದಿಗಂಬರ ಗಾವಡೆ 30 ಲಕ್ಷಕ್ಕೂ ಅಧಿಕ ಲಾಭ ಸಿಕ್ಕಿರುವ ಬಗ್ಗೆ ವಂಚಕರ ಮಾತು ನಂಬಿ ಇದ್ದ ಹಣವನ್ನು ಕಳೆದುಕೊಂಡಿದ್ದಾರೆ. ಸಿಕ್ಕಿರುವ ಲಾಭಕ್ಕೆ ಜಿಎಸ್‌ಟಿ ಪಾವತಿಸಬೇಕು ಎಂದು ಹೇಳಿ ವಂಚಕರು 2,22,017.86ರೂ ಪಡೆದು ವಂಚಿಸಿದ್ದು, ಮತ್ತೆ 45 ಸಾವಿರ ರೂಪಾಯಿ ನೀಡುವಂತೆ ದುಂಬಾಲು ಬಿದ್ದಿದ್ದಾರೆ!
ಜೊಯಿಡಾದ ತಿನೈಘಾಟ್ ಬಳಿ ದಿಗಂಬರ ಗಾವಡೆ ವಾಸಿಸುತ್ತಾರೆ. 40 ವರ್ಷದ ಅವರಿಗೆ ಆನ್‌ಲೈನ್ ಟ್ರೇಡಿಂಗ್ ಅಂದರೆ ಅಪಾರ ಆಸಕ್ತಿ. ಆಳ್ನಾವರದ ಎಸ್‌ಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಅವರು ಅದೇ ಖಾತೆ ಮೂಲಕ ವ್ಯವಹಾರ ನಡೆಸಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಟೆಲಿಗ್ರಾಮ್ ಆಫ್ ಕಾಣಿಸಿದ ಗುಂಪು ಸೇರಿಕೊಂಡರು.
ಜನವರಿ 3ರಂದು `ಡಬಲ್ ಮನಿ’ ಬಳಗದವರು ದಿಗಂಬರ ಗಾವಡೆ ಅವರನ್ನು ಅದ್ಧೂರಿಯಾಗಿ ತಮ್ಮ ಗುಂಪಿಗೆ ಸ್ವಾಗತಿಸಿದರು. ಮೊದಲು 3 ಸಾವಿರ ರೂ ಹೂಡಿಕೆ ಮಾಡುವಂತೆ ಅವರನ್ನು ಪ್ರೇರೇಪಿಸಿದರು. ತಕ್ಷಣ ದಿಗಂಬರ ಗಾವಡೆ 3 ಸಾವಿರ ರೂ ಹೂಡಿಕೆ ಮಾಡಿದರು. ಆದರೆ, 3 ಸಾವಿರ ರೂಪಾಯಿಯ ಸ್ಲಾಟ್ ಮುಗಿದ ಕಾರಣ 5 ಸಾವಿರ ಪಾವತಿ ಮಾಡಬೇಕು ಎಂದು ಮಹಾರಾಷ್ಟದ ಪದ್ಮಸಿಂಹ ಪಾಟೀಲ್ ಎಂಬಾತರು ಸೂಚಿಸಿದರು. ಇದನ್ನು ನಂಬಿದ ಅವರು ಅದೇ ದಿನ 5 ಸಾವಿರ ರೂ ಪಾವತಿಸಿದರು.
ಮರು ದಿನವೇ ದಿಗಂಬರ ಗಾವಡೆ ಅವರಿಗೆ 85359ರೂ ಲಾಭ ಸಿಕ್ಕಿತು. ಅದಕ್ಕಾಗಿಯೂ 18672ರೂ GST ಪಾವತಿಸಬೇಕು ಎಂದು ಗುಂಪಿನಲ್ಲಿದ್ದವರು ಹೇಳಿದರು. ಅದರ ಪ್ರಕಾರ ತೆರಿಗೆಯನ್ನು ಸಹ ಮಾಜಿ ಸೈನಿಕರು ನಿಷ್ಟೆಯಿಂದ ಪಾವತಿಸಿದರು. ಅದಾದ ನಂತರ 106765ರೂ ಲಾಭ ಎಂದು ತಿಳಿಸಿದ ವಂಚಕರು ಮತ್ತೆ ಜಿಎಸ್‌ಟಿ ನೆಪದಲ್ಲಿ 26691ರೂ ವಸೂಲಿ ಮಾಡಿದರು. ಆಗ, ದಿಗಂಬರ ಗಾವಡೆ ಅವರಿಗೆ ಅನುಮಾನ ಬಂದಿತು. ಅದಾಗಿಯೂ ಅವರು ಕಳುಹಿಸಿದ ಆಧಾರ್ ಕಾರ್ಡ ಹಾಗೂ ಪಾನ್ ಕಾರ್ಡ ಪೋಟೋ ನೋಡಿ ವಂಚಕರ ಮಾತು ನಂಬಿದರು.
ಅದಾದ ನಂತರ ಮತ್ತೆ 148687ರೂ ಲಾಭ ಸಿಕ್ಕಿದ್ದು, ಜನವರಿ 6ರಂದು ಜಿಎಸ್‌ಟಿ ನೆಪದಲ್ಲಿ 33454ರೂ ಪಾವತಿಸಿದರು. ಎಲ್ಲಾ ಹಣವನ್ನು ಯುಪಿಐ ಮೂಲಕ ಪಾವತಿಸುವುದಾಗಿ ಹೇಳಿದ ವಂಚಕರು ಅವರ ಯುಪಿಐ ಐಡಿ ಪಡೆದು ಮತ್ತೆ ವಂಚಿಸಿದರು. `ಪೆಮೆಂಟ್ ಪೆಂಡಿ0ಗ್’ ಎಂಬ ನಕಲಿ ಫೋಟೋ ರವಾನಿಸಿ ಪೆಂಡಿ0ಗ್ ಜಾರ್ಜಸ್ ಎಂದು 42895ರೂ ವಸೂಲಿ ಮಾಡಿದರು.
ಅದಾದ ನಂತರ ಮತ್ತೆ 233546ರೂ ಲಾಭ ಬಂದಿರುವುದಾಗಿ ತಿಳಿಸಿ, 19 ರಂದು ತೆರಿಗೆ ಎಂದು 44686ರೂ ವಸೂಲಿ ಮಾಡಿದರು. ಜ 22ರಂದು ಸಹ 317453ರೂ ಲಾಭ ದೊರೆತಿರುವುದಾಗಿ ತಿಳಿಸಿ ತೆರಿಗೆ ಎಂದು 47618ರೂ ವಸೂಲಿ ಮಾಡಿದರು. ಇದೆಲ್ಲ ಹಣವನ್ನು ದಿಗಂಬರ ಗಾವಡೆ ಖಾಸಗಿ ವ್ಯಕ್ತಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ಅದಾಗಿಯೂ ಮ್ಯಾನೇಜರ್ ಕಮಿಷನ್ ಹಣ 45 ಸಾವಿರ ರೂ ಕೊಡಬೇಕು ಎಂದು ವಂಚಕರು ಬೇಡಿಕೆ ಇಟ್ಟರು.
ಜಿಎಸ್‌ಟಿ ಹೆಸರಿನಲ್ಲಿಯೇ 222017ರೂ ಕಳೆದುಕೊಂಡಿದ್ದ ದಿಗಂಬರ ಗಾವಡೆ ಸೈಬರ್ ವಂಚನೆ ಆಗುರುವ ಬಗ್ಗೆ ಅರಿತು 1930ಗೆ ಫೋನ್ ಮಾಡಿದರು. ಅದಾದ ನಂತರ ರಾಮನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದರು.