ಕೂಲಿ ಕೆಲಸ ಮಾಡಿಕೊಂಡಿದ್ದ ದುರ್ಗಯ್ಯ ದೇವಾಡಿಗರಿಗೆ ಸರಾಯಿ ಚಟ ಅಂಟಿಕೊAಡಿತ್ತು. ಅದೇ ನಶೆಯಲ್ಲಿ ಅವರು ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ.
ಭಟ್ಕಳ ತಾಲೂಕಿನ ಶಿರಾಲಿ ತಟ್ಟಿಹಕ್ಕಲ ಬೆರ್ಮುಮನೆಯಲ್ಲಿ ದುರ್ಗಯ್ಯ ದೇವಾಡಿಗ (64) ವಾಸವಾಗಿದ್ದರು. ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಅವರ ಮಗ ಗಜಾನನ ದೇವಾಡಿಗ ಪಿಗ್ಮಿ ಸಂಗ್ರಹಿಸುತ್ತಿದ್ದರು. ಅವರಿಬ್ಬರ ಆದಾಯದಿಂದ ಇಡೀ ಕುಟುಂಬ ನಡೆಯುತ್ತಿತ್ತು. ಆದರೆ, ಮದ್ಯ ವ್ಯಸನ ದುರ್ಗಯ್ಯ ದೇವಾಡಿಗರ ದಾರಿ ತಪ್ಪಿಸಿತು.
ಒಮ್ಮೆ ರೂಡಿಸಿಕೊಂಡ ಸರಾಯಿ ಚಟವನ್ನು ಬಿಡಲು ದುರ್ಗಯ್ಯರಿಂದ ಸಾಧ್ಯವಾಗಲಿಲ್ಲ. ದಿನದಿಂದ ದಿನಕ್ಕೆ ಅವರ ವ್ಯಸನ ಹೆಚ್ಚಾಯಿತು. ದುಡಿಮೆ ಕಡಿಮೆಯಾಯಿತು. ದುಡಿದ ಹಣವೆಲ್ಲವೂ ಸರಾಯಿ ಅಂಗಡಿಯ ಪಾಲಾಯಿತು. ಇದೇ ನೋವಿನಲ್ಲಿದ್ದ ಅವರು ಫೆ 13ರ ರಾತ್ರಿ ಮಲಗಲಿಲ್ಲ. ಬದಲಾಗಿ, ಮಲಗುವ ಕೋಣೆಯಲ್ಲಿದ್ದ ನೈಲಾನ್ ಹಗ್ಗಕ್ಕೆ ಉರುಳು ಹಾಕಿಕೊಂಡರು.
ಇದನ್ನು ನೋಡಿದ ಅವರ ಮಗ ಗಜಾನನ ದೇವಾಡಿಗ ತಕ್ಷಣ ದುರ್ಗಯ್ಯ ಅವರನ್ನು ಕೆಳಗಿಳಿಸಿದರು. ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರು. ಆದರೆ, ದುರ್ಗಯ್ಯ ಬದುಕಲಿಲ್ಲ. ಭಟ್ಕಳ ಪೊಲೀಸ್ ಠಾಣೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ತಿಳಿಸಿ ಗಜಾನನ ದೇವಾಡಿಗ ಪ್ರಕರಣ ದಾಖಲಿಸಿದರು.