ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನಂದಿತಾ-ಗೋಪಾಲಕೃಷ್ಣರ ಜೋಡಿ ಇದೀಗ ಅತಂತ್ರವಾಗಿದೆ. ಅದೇ ನೋವಿನಲ್ಲಿ ಗೋಪಾಲಕೃಷ್ಣ ಮನೆ ಬಿಟ್ಟು ಹೋಗಿದ್ದಾರೆ. ಪತಿಯ ಆಗಮನದ ನಿರೀಕ್ಷೆಯಲ್ಲಿದ್ದ ನಂದಿಯಾ ಒಂಟಿಯಾಗಿದ್ದು, ಅವರ ಹುಡುಕಾಟಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಜೊಯಿಡಾ ಬಳಿಯ ಗುಂದದ ನಂದಿತಾ ನಾಯ್ಕ (25) ಹಾಗೂ ಹೊನ್ನಾವರದ ಮಾಳ್ಕೋಡಿನ ಗೋಪಾಲಕೃಷ್ಣ ಆಚಾರ್ಯ (26) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ಪಾಲಕರ ವಿರೋಧವ್ಯಕ್ತವಾಗಿತ್ತು. ಆಚಾರ್ಯರ ಮನೆಯಲ್ಲಿ ನಂದಿತಾ ಅವರನ್ನು ಒಪ್ಪಿರಲಿಲ್ಲ. ಅದಾಗಿಯೂ ಗೋಪಾಲಕೃಷ್ಣ ಆಚಾರ್ಯರು ನಂದಿತಾರನ್ನು ಕೈ ಬಿಟ್ಟಿರಲಿಲ್ಲ. ಮನೆಯವರ ವಿರೋಧಧ ನಡುವೆ ಇಬ್ಬರು ಮದುವೆ ಆಗಿ ಪ್ರತ್ಯೇಕ ಮನೆ ಮಾಡಿಕೊಂಡಿದ್ದರು.
ನoದಿತಾ ನಾಯ್ಕ ಹಾಗೂ ಗೋಪಾಲಕೃಷ್ಣ ಆಚಾರ್ಯ ಅವರ ಜೋಡಿ ಕುಮಟಾಗೆ ಬಂದಿತ್ತು. ಕೊಪ್ಪಳಕೆರವಾಡಿಯಲ್ಲಿ ಇಬ್ಬರು ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಗೋಪಾಲಕೃಷ್ಣ ಆಚಾರ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಈಚೆಗೆ ಆ ಕಂಪನಿ ಗೋಪಾಲಕೃಷ್ಣ ಆಚಾರ್ಯರನ್ನು ಕೆಲಸದಿಂದ ವಜಾ ಮಾಡಿತು. ಇದೇ ನೋವಿನಲ್ಲಿ ಅವರು ಬೇಸರದಲ್ಲಿದ್ದರು. ಪರಿಸ್ಥಿತಿ ಹೀಗೆ ಮುಂದುವರೆದರೆ ಕುಟುಂಬ ನಡೆಸುವುದು ಕಷ್ಟ ಎಂದು ಹೇಳಿಕೊಂಡಿದ್ದರು. `ಕುಟುಂಬದವರು ದೂರವಾದರು.. ಕೆಲಸವೂ ಹೊಯ್ತು’ ಎಂದು ಗೋಪಾಲಕೃಷ್ಣ ಆಚಾರ್ಯ ಬೇಸರಿಸಿಕೊಂಡಿದ್ದರು.
ನoದಿತಾ ನಾಯ್ಕ ಅವರು ಪತಿಯನ್ನು ಸಾಕಷ್ಟು ಸಮಾಧಾನ ಮಾಡಿದ್ದರು. ಆದರೂ, ಆ ಸಮಾಧಾನದಿಂದ ಅವರ ಹೊಟ್ಟೆ ತುಂಬುತ್ತಿರಲಿಲ್ಲ. ಕೆಲಸ ಇಲ್ಲದ ನೋವಿನಲ್ಲಿ ಗೋಪಾಲಕೃಷ್ಣ ಆಚಾರ್ಯ ಮನೆ ಬಿಟ್ಟು ಹೋದರು. ಫೆ 9ರ ಮಧ್ಯಾಹ್ನದಿಂದ ಅವರಿಗಾಗಿ ನಂದಿತಾ ನಾಯ್ಕ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಕೊನೆಗೂ ಪತ್ತೆಯಾಗದ ಕಾರಣ ಪೊಲೀಸರ ಮೊರೆ ಹೋದರು. ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಇದೀಗ ಗೋಪಾಲಕೃಷ್ಣ ಆಚಾರ್ಯ ಅವರ ಹುಡುಕಾಟ ನಡೆಸಿದ್ದಾರೆ.