ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ 20 ದಿನಗಳ ಹಿಂದೆ ಮಾತು ಬಿಟ್ಟ ಕಾರಣ ಅಂಕೋಲಾದ ಸಂತು ಗೌಡ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಮರಣ ಪತ್ರ ಬರೆದಿದ್ದು, ಪ್ರೀತಿ ಪಾತ್ರರೆಲ್ಲರಿಗೂ ಆ ಮೂಲಕ ಕ್ಷಮೆ ಕೋರಿದ್ದಾರೆ!
ಅಂಕೋಲಾ ತಾಲೂಕಿನ ವಾಸರಕುದ್ರಿಗೆಯ ಮೇಲಿನಗುಳಿಯ ಸಂತೋಷ ಗೌಡ (31) ಹಾಗೂ ಆಯಿಶಾ (ಹೆಸರು ಬದಲಿಸಿದೆ) ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮುಂದಿನ ಮೇ ಮಾಸದಲ್ಲಿ ಸಪ್ತಪದಿ ತುಳಿಯುವ ಬಗ್ಗೆಯೂ ಮಾತನಾಡಿಕೊಂಡಿದ್ದರು. ಆದರೆ, ಕಳೆದ 20 ದಿನಗಳ ಹಿಂದೆ ಆಯಿಶಾ ದೂರವಾಗಿದ್ದಳು. ಸಂತೋಷ ಗೌಡ ಎಷ್ಟು ಸಲ ಫೋನ್ ಮಾಡಿದರೂ ಉತ್ತರಿಸುತ್ತಿರಲಿಲ್ಲ. ಇದರಿಂದ ಸಂತೋಷ ಗೌಡ ಸಹ ಮಾನಸಿಕವಾಗಿ ಕುಗ್ಗಿದ್ದರು.
`ನೀ ಇಲ್ಲದೇ ಊಟ ಸೇರುತ್ತಿಲ್ಲ. ನಿದ್ದೆಯೂ ಬರುತ್ತಿಲ್ಲ. ಎಲ್ಲಿ ಹೊದರೂ ನಿನ್ನ ನೆನಪು ಕಾಡುತ್ತಿದೆ’ ಎಂದು ಸಂತೋಷ ಗೌಡ ಬಿಳಿ ಹಾಳೆ ಮೇಲೆ ಬರೆದಿದ್ದಾರೆ. ಇದರೊಂದಿಗೆ `ಅಮ್ಮನನ್ನು ಚನ್ನಾಗಿ ನೋಡಿಕೊಳ್ಳಿ. ನನ್ನ ಸಾವು ಪ್ರೇಮಿಗಳಿಗೆ ಪಾಠವಾಗಲಿ’ ಎಂಬರ್ಥದಲ್ಲಿಯೂ ಅವರು ಕೆಲ ವಾಕ್ಯಗಳನ್ನು ಬರೆದಿದ್ದಾರೆ. `ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರುವುದು ಬೇಡ’ ಎಂದು ಬರೆದ ಅವರು ಫೆ 19ರಂದು ಮಾವಿನ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.