ಯಲ್ಲಾಪುರದಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಲಾರಿ ಅರಬೈಲ್ ಘಟ್ಟ ಮುಕ್ತಾಯದ ನಂತರ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ತಾಯಿ-ಮಗು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊತೆಗೆ ಇನ್ನೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಫೆ 19ರ ನಸುಕಿನಲ್ಲಿ ಈ ಅಪಘಾತ ನಡೆದಿದೆ. ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಬಿಜಾಪುರದ ಪ್ರಶಾಂತ ಕುಂಬಾರ ಎಂಬಾತ ಅತಿ ವೇಗದಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದು ಅಪಘಾತಕ್ಕೆ ಕಾರಣ. ಕೊಪ್ಪಳದ ಶ್ರೀಕಾಂತ ರೆಡ್ಡಿ ಅವರು ತಮ್ಮ ಕುಟುಂಬದೊoದಿಗೆ ಅಂಕೋಲಾದಿoದ ಹುಬ್ಬಳ್ಳಿ ಕಡೆ ಚಲಿಸುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಗುದ್ದಿದೆ.
ವೇಗವಾಗಿ ಬಂದ ಲಾರಿ ಅರಬೈಲ್ ಮಾರುತಿ ದೇವಸ್ಥಾನದಿಂದ ಕೊಂಚ ಮುಂದೆ ಬಲಗಡೆ ಹೊರಳಿದೆ. ಆ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ರಭಸವಾಗಿ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಶ್ರೀಕಾಂತ ರೆಡ್ಡಿ ಅವರ ಪತ್ನಿ ಚೈತ್ರ ಆರ್ (31) ಹಾಗೂ ಅವರ 7 ತಿಂಗಳ ಮಗು ಶ್ರೀಹಾನ್ ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಶ್ರೀಕಾಂತ ರೆಡ್ಡಿ ಹಾಗೂ ಅವರ ಜೊತೆಗಿದ್ದ ಆರ್ ವೆಂಕಟೇಶ್ ಗಂಭಿರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ತನಿಖೆ ನಡೆಸುತ್ತಿದ್ದಾರೆ. ಸಿಪಿಐ ರಮೇಶ ಹಾನಾಪುರ ಹಾಗೂ ಶಿರಸಿ ಡಿವೈಎಸ್‌ಪಿ ಗಣೇಶ ಕೆ ಎಲ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.