`ರಾಜ್ಯದ 224 ಶಾಸಕರಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ’ ಎಂದು ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಆದರೆ, ಇದು ಸತ್ಯವಲ್ಲ. ಕಾರಣ, ಭೀಮಣ್ಣ ನಾಯ್ಕರಿಗಿಂತಲೂ ಹೆಚ್ಚು ಸುಳ್ಳು ಹೇಳುವವರು ಬೇರೆಯವರಿದ್ದಾರೆ!
`ಇನ್ನೂ ಎರಡು ವಾರದ ಒಳಗೆ ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರ ಜಮಾ ಆಗಲಿದೆ’ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದರು. ಆದರೆ, ಆ ಎರಡು ವಾರ ಕಳೆದರೂ ಪರಿಹಾರ ಹಣ ಬಂದಿಲ್ಲ. `ಹಾಲಕ್ಕಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಸಿದ್ಧ’ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಪದ್ಮಶ್ರೀ ಸುಕ್ರಿ ಗೌಡ ಅವರಿಗೆ ಮಾತು ಕೊಟ್ಟಿದ್ದರು. ಆದರೆ, ಆ ಮಾತು ಈಡೇರಲಿಲ್ಲ.
`ಕುಮಟಾ ಪಟ್ಟಣದಲ್ಲಿನ ಒಳಚರಂಡಿ ವ್ಯವಸ್ಥೆ ಸರಿಪಡಿಸುವೆ’ ಎಂದು ಎರಡನೇ ಬಾರಿ ಶಾಸಕರಾಗುವ ಪೂರ್ವದಲ್ಲಿಯೇ ದಿನಕರ ಶೆಟ್ಟಿ ಭರವಸೆ ನೀಡಿದ್ದರು. ಆದರೆ, ಕೋಟಿ ರೂ ವೆಚ್ಚದ ಯೋಜನೆ ಏನಾಯಿತು? ಎಂದು ಯಾರಿಗೂ ಗೊತ್ತಾಗಲಿಲ್ಲ. `ಕಾರವಾರದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಮಾಡುವೆ. ತನ್ನದೇ ಜಾಗವನ್ನು ಸುಸಜ್ಜಿತ ಆಸ್ಪತ್ರೆಗೆ ನೀಡುವೆ’ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದರು. ಆದರೆ, ಈ ಎರಡೂ ಕೆಲಸ ಆಗಲಿಲ್ಲ.
ಇನ್ನೂ, `ಮುರುಡೇಶ್ವರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬದ್ಧ’ ಎಂದು ಭಟ್ಕಳ ಕ್ಷೇತ್ರದ ಶಾಸಕರೂ ಆದ ಸಚಿವ ಮಂಕಾಳು ವೈದ್ಯ ಹೇಳಿದ್ದರು. ಆದರೆ, ಅಲ್ಲಿ ಮೊದಲಿದ್ದ ಪ್ರವಾಸೋದ್ಯಮ ಚಟುವಟಿಕೆಗಳು ಸಹ ನಿಂತು ಹೋಗಿದ್ದರಿಂದ ಆ ಮಾತು ಸುಳ್ಳಾಗಿದೆ. ಇನ್ನೂ `ಚುನಾವಣೆಯಲ್ಲಿ ಗೆದ್ದು ಬಂದರೆ ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಒಡ್ಡುವೆ’ ಎಂದು ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದರು. ಆದರೆ, ಅದು ಸಹ ಈವರೆಗೂ ಸಾಧ್ಯವಾಗಲಿಲ್ಲ.
ಒಟ್ಟಾರೆಯಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೂ ಸುಳ್ಳು ಹೇಳದೇ ಇರುವ ಶಾಸಕರಿಲ್ಲ. ಎಲ್ಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರ ಭರವಸೆಗಳ ಬಗ್ಗೆ ಅಧ್ಯಯನ ನಡೆಸಿದರೂ ಅಲ್ಲಿಯೂ ಸುಳ್ಳು ಹೇಳದಿರುವವರು ಕಾಣುತ್ತಿಲ್ಲ. ಇನ್ನೂ, `ವಿವಿಧ ಕಂಪನಿಗಳ ಸಿಎಸ್‌ಆರ್ ಹಣವನ್ನು ಆಸ್ಪತ್ರೆಗಾಗಿ ತರುವೆ’ ಎಂದು ಸ್ವತಃ ಅನಂತಮೂರ್ತಿ ಹೆಗಡೆ ಹೇಳಿದ್ದರು. ಆದರೆ, ಆ ಮಾತು ಈಡೇರಿಲ್ಲ. ಹೀಗಾಗಿ `ಸುಳ್ಳುಗಾರ ಪ್ರಶಸ್ತಿ’ ಘೋಷಣೆ ಮಾಡಿರುವ ಅನಂತಮೂರ್ತಿ ಹೆಗಡೆ ಅವರ ಮಾತುಗಳೆಲ್ಲವೂ ಸತ್ಯವಲ್ಲ!