ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತಾಯಿ ಜೊತೆ ಮನೆಗೆ ಮರಳುತ್ತಿದ್ದ ಪ್ರೇಮಾನಂದ ತಳಗೇರಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಶಿರಸಿಯ ಗಣೇಶ ನಗರದ ಪ್ರೇಮಾನಂದ ಗಂಗಾಧರ ತಳಗೇರಿ (25) ಹನುಮಂತಿಯಲ್ಲಿ ವಾಸವಾಗಿದ್ದರು. ಎದೆನೋವಿನ ಕಾರಣ ಅವರು ಶುಕ್ರವಾರ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಪಡೆದು ಅವರು ದೇವಿಕೆರೆ ಮಾರ್ಗವಾಗಿ ಮರಳುತ್ತಿದ್ದರು. ಈ ನಡುವೆ ಬೈಕಿನಿಂದ ಬಿದ್ದು ಸಾವನಪ್ಪಿದರು.
ಪ್ರೇಮಾನಂದ ತಳಗೇರಿ ಅವರ ತಾಯಿಯೂ ಬೈಕಿನಲ್ಲಿ ಹಿಂದೆ ಕೂತಿದ್ದರು. ಬೈಕು ಬಿದ್ದ ರಭಸಕ್ಕೆ ಅವರು ಗಾಯಗೊಂಡರು. ಪ್ರೇಮಾನಂದ ಅವರ ತಾಯಿಯನ್ನು ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿಯ ಮುಂದೆ ಮಗ ಸಾವನಪ್ಪಿದ ಕಾರಣ ಅನೇಕರು ಕಣ್ಣೀರಾದರು.
ಇನ್ನೂ, ಪ್ರೇಮಾನಂದ ಅವರ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಅಲ್ಲಲ್ಲಿ ರಸ್ತೆ ಬದಿ ಅಗೆದ ಕಾರಣ ಮಣ್ಣಿಗೆ ಬೈಕು ಸಿಲುಕಿ ಬಿದ್ದಿರುವ ಬಗ್ಗೆಯೂ ಅನುಮಾನಗಳಿವೆ. ಬೈಕಿನಿಂದ ಬಿದ್ದ ಪ್ರೇಮಾನಂದರ ಹಣೆಗೆ ಕಲ್ಲು ತಾಗಿ ಗಾಯವೂ ಆಗಿದೆ.



