ಕಳೆದ ಭಾನುವಾರ ಮುಂಡಗೋಡದಲ್ಲಿ ಮೂವರು ಮಕ್ಕಳ ಮೇಲೆ ದಾಳಿ ಮಾಡಿದ್ದ ಹುಚ್ಚು ನಾಯಿಗಳ ಗುಂಪು ಈ ಭಾನುವಾರವೂ ಮತ್ತೆ ಮೂವರ ಮೇಲೆ ಆಕ್ರಮಣ ನಡೆಸಿದೆ.
ಈ ದಿನ ಮುಂಡಗೋಡು ಪಟ್ಟಣದ ನಂದೀಶ ನಗರದಲ್ಲಿ ಹುಚ್ಚು ನಾಯಿಗಳು ಓಡಾಡುತ್ತಿವೆ. ಅಲ್ಲಿ ಆಟವಾಡುತ್ತಿದ್ದ ಅರುಣಿತಾ ಮಹೇಶ ಪಾಟೀಲ್(3), ನಂದೀಶ ಶಾಂತಪ್ಪ ಹಂಚಿನಮನಿ(5) ಹಾಗೂ ಚಿರಂಜೀವಿ ಸುನೀಲ ಮತ್ತಿಗಟ್ಟಿ (5) ಎಂಬಾತರ ಮೇಲೆ ನಾಯಿಗಳು ದಾಳಿ ನಡೆಸಿವೆ. ದಾಳಿಯಿಂದ ತತ್ತರಿಸಿದ ಮೂರು ಮಕ್ಕಳಿಗೂ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಕಳೆದ ಭಾನುವಾರ ಮುಂಡಗೋಡು ಪಟ್ಟಣದ ಕಿಲ್ಲೆ ಓಣಿಯ ಸಮೀರ ನಿಗೋಣಿ ಅವರ 6 ವರ್ಷದ ಮಗ ಶಾದಾಬ, ಲಮಾಣಿ ತಾಂಡಾದ 4 ವರ್ಷದ ಅನನ್ಯ ಲಮಾಣಿ ಹಾಗೂ ಕಿಲ್ಲೆ ಓಣಿಯ ಮತ್ತೊಬ್ಬ ಬಾಲಕನ ಮೇಲೆ ಹುಚ್ಚು ನಾಯಿ ದಾಳಿ ನಡೆಸಿತ್ತು. ಆ ವೇಳೆ ಸಹ ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ದಾಳಿ ನಡೆದಿತ್ತು. ನಾಯಿ ಕಚ್ಚಿದ್ದರಿಂದ ಮಕ್ಕಳು ಗಾಯಗೊಂಡು ಅಲ್ಲಿಯೇ ಬಿದ್ದು ಹೊರಳಾಟ ನಡೆಸಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ನಾಯಿಗೆ ಹುಚ್ಚು ಹಿಡಿದ ಕಾರಣ ಜನ ಅದನ್ನು ಊರಿನಿಂದ ಹೊರಗೆ ಓಡಿಸುವ ಪ್ರಯತ್ನ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಒಂದಾದ ನಂತರ ಇನ್ನೊಂದು ಓಣಿಗೆ ಈ ನಾಯಿಗಳು ಸಂಚರಿಸುತ್ತಿವೆ. ಜೊತೆಗೆ ಇನ್ನಿತರ ನಾಯಿಗಳಿಗೂ ಹುಚ್ಚು ಹಿಡಿಸುತ್ತಿವೆ. ನಾಯಿ ಕಾಟದಿಂದಾಗಿ ಮುಂಡಗೋಡು ಪಟ್ಟಣದಲ್ಲಿ ಆತಂಕ ಸೃಷ್ಠಿಯಾಗಿದೆ.