ಪ್ರಕರಣವೊಂದರ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹೊರಟಿದ್ದ ಕೃಷ್ಣಮೂರ್ತಿ ಭಟ್ಟ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಹೀಗಾಗಿ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.
ಶಿರಸಿ ಕೆಎಚ್‌ಸಿ ಕಾಲೋನಿಯ ಕೃಷ್ಣಮೂರ್ತಿ ಭಟ್ಟ ಅವರಿಗೆ ಮರಾಠಿಕೊಪ್ಪದ ಪರಮೇಶ್ವರ ಪಿಳ್ಳೆ ಬೆದರಿಕೆ ಒಡ್ಡಿದ್ದಾರೆ. 2023ರಲ್ಲಿ ನಡೆದ ಅಪರಾಧ ಪ್ರಕರಣವೊಂದರಲ್ಲಿ ಪರಮೇಶ್ವರ ಪಿಳ್ಳೆ ಆರೋಪಿಯಾಗಿದ್ದರು. ಅವರ ವಿರುದ್ಧ ಕೃಷ್ಣಮೂರ್ತಿ ಭಟ್ಟ ಅವರು ಸಾಕ್ಷಿ ಹೇಳುವುದಕ್ಕಾಗಿ ಫೆ 10ರಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹೋಗುತ್ತಿದ್ದರು.
ನ್ಯಾಯಾಲಯದ ಹಿಂದಿನ ಗೇಟಿನ ಬಳಿ ನಿಂತಿದ್ದ ಪರಮೇಶ್ವರ ಪಿಳ್ಳೆ ಅದೇ ಮಾರ್ಗವಾಗಿ ಹೊರಟಿದ್ದ ಕೃಷ್ಣಮೂರ್ತಿ ಭಟ್ಟರನ್ನು ಅಡ್ಡಗಟ್ಟಿದರು. `ನನ್ನ ವಿರುದ್ಧ ಸಾಕ್ಷಿ ಹೇಳಿದರೆ ನಿನ್ನನ್ನು ಕತ್ತಿಯಿಂದ ಹೊಡೆದು ಸಾಯಿಸುತ್ತೇನೆ’ ಎಂದು ಪರಮೇಶ್ವರ ಪಿಳ್ಳೆ ಬೆದರಿಸಿದರು. `ಸಾಕ್ಷಿ ಹೇಳಿ ನೋಡು. ನಿನ್ನ ಜೀವ ತೆಗೆದೇ ತೀರುತ್ತೇನೆ’ ಎಂದು ಏರುಧ್ವನಿಯಲ್ಲಿ ದಬಾಯಿಸಿದರು.
ಅದೇ ದಿನ ಸಂಜೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗೆ ತೆರಳಿ ಕೃಷ್ಣಮೂರ್ತಿ ಭಟ್ಟ ಪೊಲೀಸರ ಬಳಿ ದೂರಿದರು. ಫೆ 22ರಂದು ನ್ಯಾಯಾಲಯದಿಂದ ಅನುಮತಿ ದೊರೆತ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.