ಅನುಕಂಪ ಆಧಾರಿತ ನೌಕರಿಯಲ್ಲಿನ ಅನ್ಯಾಯ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ ವೀಣಾ ಶೆಟ್ಟಿ ಎಂಬಾತರು ಸ್ವತಃ ವಾದ ಮಂಡಿಸಿ ಗೆಲುವು ಸಾಧಿಸಿದ್ದಾರೆ. ಶಿರಸಿಯ ಕೆಡಿಸಿಸಿ ಬ್ಯಾಂಕ್ ನೌಕರಿಗಾಗಿ ಅವರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.
ಕಾನಸೂರಿನ ಕೆಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅಟೆಮಡರ್ ಆಗಿ 32 ವರ್ಷ ಸೇವೆ ಸಲ್ಲಿಸಿದ್ದ ವೆಂಕಟೇಶ್ ಶೇಟ್ ಅವರು 2007ರಲ್ಲಿ ಸಾವನಪ್ಪಿದ್ದರು. ಅವರ ಪುತ್ರಿ ವೀಣಾ ಶೆಟ್ಟಿ ಅವರಿಗೆ ಅನುಕಂಪ ಆಧಾರಿತ ಉದ್ಯೋಗ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಐದು ಬಾರಿ ಅವರು ಅರ್ಜಿ ಸಲ್ಲಿಸಿದರೂ ಬ್ಯಾಂಕ್ ನೇಮಕಾತಿ ನಡೆದಿರಲಿಲ್ಲ. ನಂತರ 2021ರವರೆಗೆ ಒಪ್ಪಂದದ ಮೇರೆಗೆ ಬ್ಯಾಂಕ್ ನೌಕರಿ ನೀಡಿತ್ತು.
ವೀಣಾ ಶೇಟ್ ಅವರು ಯೋಜನೆಯ ಪ್ರಕಾರ ಅರ್ಹತೆ ಹೊಂದಿದ್ದರಿoದ ಅಟೆಂಡರ್ ಹುದ್ದೆಗೆ ಅನುಪಕಂಪದ ಆಧಾರದ ಮೇಲೆ ನೇಮಕಾತಿಯನ್ನು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಆದರೆ, ಅದನ್ನು ಬ್ಯಾಂಕ್ ಪುರಸ್ಕರಿಸಲಿಲ್ಲ. ವೀಣಾ ಶೇಟ್ ಅವರು ವಿವಾಹಿತರಾದ ಕಾರಣ ಆ ಅರ್ಜಿಯನ್ನು ಬ್ಯಾಂಕ್ ಪರಿಗಣಿಸಿರಲಿಲ್ಲ. ಹೀಗಾಗಿ ವೀಣಾ ಅವರು ನ್ಯಾಯಾಲಯದ ಮೆಟ್ಟಿಲೇರಿದರು. ಸ್ವತಃ ವಾದ ಮಾಡಿ ಅವರು ಬಡತನ, ಕುಟುಂಬದ ಪರಿಸ್ಥಿತಿಯ ಬಗ್ಗೆ ನ್ಯಾಯಾಧೀಶರ ಮನವರಿಕೆ ಮಾಡಿದರು.
`ವಿವಾಹಿತರಾಗಿರುವ ಕಾರಣಕ್ಕೆ ಉದ್ಯೋಗ ನಿರಾಕರಿಸುವುದು ಸರಿಯಲ್ಲ’ ಎಂದು ನ್ಯಾಯಾಲಯ ಪರಿಗಣಿಸಿದ್ದು, ವೀಣಾ ಅವರಿಗೆ ಅನುಕಂಪ ಆಧಾರಿತ ನೌಕರಿ ನೀಡುವಂತೆ ಆದೇಶಿಸಿತು. ಇದರೊಂದಿಗೆ ತಾಯಿಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ವೀಣಾ ಅವರಿಗೂ ನ್ಯಾಯಾಲಯ ಸೂಚಿಸಿತು.