`ಶಾಸಕ-ಸoಸದರಿಗಿರುವಷ್ಟೇ ಗ್ರಾಮ ಪಂಚಾಯತ ಸದಸ್ಯರಿಗೂ ಅಧಿಕಾರವಿದ್ದು, ಅವರಿಗಿರುವ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಅದಾಗಿಯೂ ಕೆಲ ಹಿರಿಯ ಅಧಿಕಾರಿಗಳು ಗ್ರಾ ಪಂ ಸದಸ್ಯರ ವ್ಯಾಪ್ತಿಯಲ್ಲಿ ಇಲ್ಲಸಲ್ಲದ ಸುತ್ತೋಲೆ ಹೊರಡಿಸಿ ಕೈಯಾಡಿಸುತ್ತಿದ್ದಾರೆ’ ಎಂದು ಚುನಾಯಿತ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಸತೀಶ ಕಾಡಶೆಟ್ಟಿಕಳ್ಳಿ ಕಿಡಿಕಾರಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ಮುಂದೆಯೇ ಸರ್ಕಾರದ ಅವ್ಯವಸ್ಥೆಗಳ ಬಗ್ಗೆ ಸತೀಶ ಕಾಡಶೆಟ್ಟಿಕಳ್ಳಿ ಆಕ್ಷೇಪವ್ಯಕ್ತಪಡಿಸಿದರು.
ಶನಿವಾರ ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ಚುನಾಯಿತ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಒಕ್ಕೂಟವನ್ನು ಉದ್ಘಾಟಿಸಿದರು. ಅದಾದ ನಂತರ ಗ್ರಾ ಪಂ ಪ್ರತಿನಿಧಿಗಳ ಅಳಲು ಆಲಿಸಿದರು. `ಪಂಚಾಯತ ಅಧಿಕಾರದಲ್ಲಿ ಯಾವುದೇ ಶಾಸಕ ಹಸ್ತಕ್ಷೇಪ ಮಾಡಲು ಅಧಿಕಾರವಿಲ್ಲ. ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿರುವ ಗ್ರಾ ಪಂ ಪ್ರತಿನಿಧಿಗಳ ಮೇಲೆ ಅಧಿಕಾರಿಗಳ ದಬ್ಬಾಳಿಕೆಯೂ ಸರಿಯಲ್ಲ’ ಎಂದು ಸತೀಶ ಕಾಡಶೆಟ್ಟಿಕಳ್ಳಿ ಹೇಳಿದರು. `ಗ್ರಾಮ ಪಂಚಾಯತಗೆ ಸಾಕಷ್ಟು ಅಧಿಕಾರವಿದ್ದರೂ ಆ ಅಧಿಕಾರ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಸಹ 1982ರಲ್ಲಿ ಪುರಸಭೆಗೆ ಆಯ್ಕೆಯಾಗಿ ಆ ನಂತರ ಶಾಸಕನಾದವ. ನಿಮ್ಮ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ’ ಎಂದು ದಿನಕರ ಶೆಟ್ಟಿ ಸಮಾಧಾನ ಮಾಡಿದರು.
`ನರೆಗಾ ಯೋಜನೆ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ. ಆಶ್ವಾಸನಾ ನಿಧಿ, ಜಲಜೀವನ್ ಮಷಿನ್ ಹೆಸರಿನಲ್ಲಿ ಎನ್‌ಜಿಓಗಳಿಗೆ ಹಣ ನೀಡಿ ಅಕ್ರಮ ನಡೆಸಲಾಗುತ್ತಿದೆ. ತಪ್ಪು ಕೆಲಸ ನಡೆದಲ್ಲಿ ಮಾತ್ರ ಪಂಚಾಯತವನ್ನು ಹೊಣೆಗಾರರನ್ನಾಗಿಸಲಾಗುತ್ತಿದೆ. ಕಾಯ್ದೆಗೆ ವಿರುದ್ಧವಾಗಿ ತಾ ಪಂ ಹಾಗೂ ಜಿ ಪಂ ಅಧಿಕಾರಿಗಳು ಸಹ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಗ್ರಾ ಪಂ ಸದಸ್ಯರು ಸಭೆಯಲ್ಲಿ ಕಿಡಿಕಾರಿದರು. `ಗ್ರಾ ಪಂ ಪ್ರತಿನಿಧಿಗಳಿಗೆ ಸರ್ಕಾರ ಮಾಸಿಕ 2 ಸಾವಿರ ರೂ ಮಾತ್ರ ಗೌರವಧನ ನೀಡುತ್ತಿದೆ. ಅವರಿಗೆ ಸೂಕ್ತ ಗೌರವಧನ ನೀಡಬೇಕು’ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಉತ್ತರ ಕನ್ನಡ ಜಿಲ್ಲಾ ಚುನಾಯಿತ ಗ್ರಾಮ ಪಂಚಾಯತ ಪ್ರತಿನಿಧಿಗಳ ಒಕ್ಕೂಟದ ಸಂಚಾಲಕ ಎಂ ಕೆ ಭಟ್ ಯಡಳ್ಳಿ, ಕುಮಟಾ ಸಂಘಟನೆ ಅಧ್ಯಕ್ಷ ನಾಗರಾಜ ನಾಯ್ಕ, ಪ್ರಮುಖರಾದ ವೆಂಕಟ್ರಮಣ ಪಟಗಾರ ಇತರರು ಇದ್ದರು.