ಜಾನುವಾರುಗಳ ಮೇವಿಗಾಗಿ ದಾಸ್ತಾನು ಮಾಡಿದ್ದ ಹುಲ್ಲಿನ ಪೆಂಡೆಗೆ ಆಕಸ್ಮಿಕ ಅಗ್ನಿಸ್ಪರ್ಶವಾಗಿದೆ. ಪರಿಣಾಮ 400ಕ್ಕೂ ಅಧಿಕ ಹುಲ್ಲಿನ ಪೆಂಡೆಗಳು ಸುಟ್ಟು ಬೂದಿಯಾಗಿದೆ.
ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ನಾಗರಾಜ ಗುಬ್ಬಕ್ಕನವರ್ ಅವರು ಹುಲ್ಲು ದಾಸ್ತಾನು ಮಾಡಿದ್ದರು. ಶನಿವಾರ ಇದಕ್ಕೆ ಬೆಂಕಿ ತಗುಲಿದ ಪರಿಣಾಮ ದಟ್ಟ ಹೊಗೆ ಆವರಿಸಿತು. ಸುದ್ದಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸಿದರು. ಅಷ್ಟರೊಳಗೆ ಬಹುತೇಕ ಹುಲ್ಲಿನ ಪೆಂಡೆಗಳು ಸುಟ್ಟು ಕರಕಲಾಗಿದ್ದವು.
ಹೆಚ್ಚಿನ ಅನಾಹುತ ನಡೆಯದಂತೆ ಅಗ್ನಿಶಾಮಕ ಸಿಬ್ಬಂದಿ ತಡೆದರು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅವಘಡದಿಂದ ನಾಗರಾಜ ಗುಬ್ಬಕ್ಕನವರ್ ಅವರಿಗೆ ಅಂದಾಜು ಒಂದುವರೆ ಲಕ್ಷ ರೂ ಹಾನಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ.