`ಸಾಕಷ್ಟು ಯೋಜನೆಗಳಿಂದ ನಿರಾಶ್ರೀತರಾದ ಮೀನುಗಾರರನ್ನು ಮತ್ತೆ ಅತಂತ್ರರನ್ನಾಗಿಸಲು ಸರ್ಕಾರ ಬಂದರು ನಿರ್ಮಾಣಕ್ಕೆ ಆಸಕ್ತಿವಹಿಸಿದೆ. ಬಂದರು ಯೋಜನೆಗಳಿಂದ ಮೀನುಗಾರರ ಬದುಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿಲೀಪ್ ಅರ್ಗೇಕರ್ ಕಿಡಿಕಾರಿದ್ದಾರೆ.
`ಅಂಕೋಲಾದ ಕೇಣಿ, ಹೊನ್ನಾವರದ ಕಾಸರಕೋಡ ಹಾಗೂ ಕಾರವಾರದಲ್ಲಿನ ಬಂದರು ಯೋಜನೆ ಮೀನುಗಾರರ ಮೇಲಿನ ದಬ್ಬಾಳಿಕೆಯಾಗಿದೆ. ಸಮುದ್ರವನ್ನು ನಂಬಿ ಮೀನುಗಾರಿಕೆ ಮಾಡಿಕೊಂಡಿರುವ ಮೀನುಗಾರರಿಗೆ ಬಂದರು ನಿರ್ಮಾಣ ಮಾರಕವಾಗಿದೆ. ಬಂದರು ನಿರ್ಮಾಣದ ನಂತರ ಮೀನುಗಾರಿಕೆ ನಶಿಸಲಿದ್ದು, ಮೀನುಗಾರಿಕೆ ನಂಬಿ ಬದುಕುತ್ತಿರುವವರು ಬೀದಿಗೆ ಬರಲಿದ್ದಾರೆ’ ಎಂದು ದಿಲೀಪ ಅರ್ಗೇಕರ್ ಆತಂಕವ್ಯಕ್ತಪಡಿಸಿದ್ದಾರೆ.
`ಮೀನುಗಾರಿಕಾ ಸ್ಥಳದಲ್ಲಿ ಬಂದರು ನಿರ್ಮಿಸಿದರೆ ಮೀನುಗಾರಿಕೆ ಅಸಾಧ್ಯ. ತಲೆತಲೆಮಾರುಗಳಿಂದ ಮೀನುಗಾರಿಕೆ ನಡೆಸಿಕೊಂಡು ಬಂದಿರುವವರ ಬಗ್ಗೆ ಸರ್ಕಾರ ಚಿಂತಿಸಬೇಕು’ ಎಂದವರು ಒತ್ತಾಯಿಸಿದ್ದಾರೆ. `ಬಂದರು ನಿರ್ಮಾಣದಿಂದ ಸಮುದ್ರದಲ್ಲಿನ ಜೀವಕೋಶಗಳಿಗೆ ಹಾನಿ ಆಗಲಿದೆ. ಮೀನು ಸಂತತಿಯೂ ನಶಿಸಲಿದೆ’ ಎಂದವರು ಹೇಳಿದ್ದಾರೆ.
`ಮೀನುಗಾರರು ಅಭಿವೃದ್ಧಿಯ ವಿರೋಧಿಗಳಲ್ಲ. ಮೀನುಗಾರರ ಹೊಟ್ಟೆ ಮೇಲೆ ಹೊಡೆದು ಬಂದರು ಮಾಡುವುದು ಸರಿಯಲ್ಲ. ಬಂದರು ನಿರ್ಮಾಣಕ್ಕೆ ಇಡೀ ಜಿಲ್ಲೆಯ ಮೀನುಗಾರರ ವಿರೋಧವಿದೆ’ ಎಂದು ಹೇಳಿದ್ದಾರೆ. `ಬಂದರು ಯೋಜನೆ ಕೈ ಬಿಡದೇ ಇದ್ದರೆ ಜಿಲ್ಲೆಯ ಜನರೆಲ್ಲರೂ ಒಟ್ಟಾಗಿ ಹೋರಾಟ ನಡೆಸಲಿದ್ದಾರೆ’ ಎಂದು ದಿಲೀಪ ಅರ್ಗೇಕರ್ ಹಾಗೂ ರೋಷನ್ ಹರಿಕಂತ್ರ ಇತರರು ಎಚ್ಚರಿಸಿದ್ದಾರೆ.




