ಅಂಕೋಲಾ ತಾಲೂಕಿನ ಜೆಸಿ ಕಾಲೇಜು ವಿದ್ಯಾರ್ಥಿನಿ ಅನುಷಾ ಆಗೇರ್ ಆರೋಗ್ಯದಲ್ಲಿನ ದಿಢೀರ್ ಏರುಪೇರಿನಿಂದ ಸಾವನಪ್ಪಿದ್ದಾರೆ.
ಕಾಲೇಜಿನಿಂದ ಈ ವರ್ಷದ ಎನ್‌ಎಸ್‌ಎಸ್ ಶಿಬಿರವನ್ನು ಬೆಳಸೆ ಸೋಣಗಿ ಮಕ್ಕಿಯಲ್ಲಿ ಆಯೋಜಿಸಲಾಗಿತ್ತು. ಅನುಷಾ ಆಗೇರ್ ಜೆಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ ಎಸ್ ಸಿ ಓದುತ್ತಿದ್ದರು. ಅವರು ಸಹ ಅತ್ಯಂತ ಉತ್ಸಾಹದಿಂದ ಶಿಬಿರದಲ್ಲಿ ಭಾಗವಹಿಸಿದ್ದರು.
ಅತ್ಯಂತ ಲವಲವಿಕೆಯಿಂದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅನುಷಾ ಆಗೇರ್ ಅವರಿಗೆ ಸೋಮವಾರ ದಿಢೀರ್ ಆಗಿ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ತಲೆ ಸುತ್ತು ಬಂದು ನೆಲಕ್ಕೆ ಬಿದ್ದ ಅವರನ್ನು ಸ್ವಯಂ ಸೇವಕರು ಉಪಚರಿಸಿದರು. ಅದಾದ ನಂತರ ಅನುಷಾ ವಾಂತಿ ಮಾಡಿಕೊಂಡರು.
ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಯಿತು. ಆದರೆ, ಆಸ್ಪತ್ರೆಗೆ ಬರುವ ಮುನ್ನವೇ ಅನುಷಾ ಆಗೇರ್ ಕೊನೆ ಉಸಿರೆಳೆದರು.