ಕೊ0ಕಣ ರೈಲ್ವೆಯಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಗೋವಾದಲ್ಲಿ ಅಧಿಕಾರಿಗಳು ಹಾಗೂ ರೈಲ್ವೆ ಬಳಕೆದಾರರ ಜೊತೆ ಸಭೆ ನಡೆಸಿದ್ದಾರೆ.
ಕೊಂಕಣ ರೈಲ್ವೆ ಸಿಎಂಡಿ ಸಂತೋಷ್ ಝಾ ಜೊತೆ ಹಲವು ವಿಷಯಗಳ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚಿಸಿದ್ದಾರೆ. ಸಂಸದ ಎಂ ಕೆ ಪ್ರೇಮಚಂದ್ರನ್ ಸಹ ಈ ಸಭೆಯಲ್ಲಿದ್ದು ಸಲಹೆ ನೀಡಿದ್ದಾರೆ. `ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅವಶ್ಯಕವಾಗಿರುವ ನೀರು ಒದಗಿಸಬೇಕು. ಶೌಚಾಲಯ ಸ್ವಚ್ಛತೆಗೆ ಒತ್ತು ನೀಡಬೇಕು’ ಎಂದು ಕಾಗೇರಿ ಸೂಚಿಸಿದ್ದಾರೆ. `ಕೊಂಕಣ ರೈಲ್ವೆಯ ಭೂಸ್ವಾಧೀನದಿಂದ ನಿರಾಶ್ರಿತರಾದವರಿಗೆ ಬಾಕಿ ಉಳಿದ ಹಣ ಕೂಡಲೇ ಪಾವತಿಸಬೇಕು. ನಿರಾಶ್ರಿತ ಕುಟುಂಬಕ್ಕೆ ಉದ್ಯೋಗವನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೂ ಬೆಂಗಳೂರು – ಮುರುಡೇಶ್ವರ ರೈಲನ್ನು ವಾಸ್ಕೋವರೆಗೆ ವಿಸ್ತರಿಸುವ ಬಗ್ಗೆ ಚರ್ಚಿಸಿದ್ದಾರೆ. ಕುಮಟಾ ಮತ್ತು ಗೋಕರ್ಣದ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಮೇಲ್ದರ್ಜೆಗೆ ಏರಿಸುವ ಕೆಲಸ ಶೀಘ್ರದಲ್ಲಿ ಪ್ರಾರಂಭಿಸುವoತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾರವಾರ ಬೆಂಗಳೂರು ಮಾರ್ಗವಾಗಿ ಓಡಾಡುವ ಪಂಚಗAಗಾ ಎಕ್ಸಪ್ರೆಸ್ ರೈಲ್ವೆಗೆ ಹೆಚ್ಚುವರಿಯಾಗಿ 4 ಭೋಗಿಗಳನ್ನು ಅಳವಡಿಸಲು ಅವರು ಸೂಚಿಸಿದರು.
ಈ ವೇಳೆ `ಕಾರವಾರದಿಂದ ಭಟ್ಕಳವರೆಗೆ ರೈಲು ನಿಲ್ದಾಣ ಮಳೆಗಾಲದಲ್ಲಿ ಸೋರುತ್ತಿದೆ’ ಎಂದು ರೈಲು ಬಳಕೆದಾರರು ದೂರಿದರು. `ಮಳೆಗಾಲದಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗದoತೆ ಮೇಲ್ಚಾವಣಿ ನಿರ್ಮಿಸಿ’ ಎಂದು ಸಂಸದರು ತಾಕೀತು ಮಾಡಿದರು. ಇದರೊಂದಿಗೆ ಎಲ್ಲಾ ಮುಖ್ಯ ರಸ್ತೆಯಿಂದ ರೈಲು ನಿಲ್ದಾಣ ಕೂಡುರಸ್ತೆ ದುರಸ್ಥಿ ನಡೆಸುವಂತೆಯೂ ಸೂಚಿಸಿದರು.