ಶಿರಸಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಕೋಟಿ ರೂ ವೆಚ್ಚದ ಬಿಡು ಕಬ್ಬಿಣದ ಪೈಪ್‌ಲೈನ್’ಗಳು ಕಳ್ಳತನವಾಗಿದೆ. ಒಂದು ವಾರದ ಹಿಂದೆ ನಡೆದ ಕಳ್ಳತನ ಪ್ರಕರಣ ಸುದ್ದಿ ಎಲ್ಲಡೆ ಹಬ್ಬಿದ್ದು, ಮುಜುಗರ ಸಹಿಸದೇ ನಗರ ಆಡಳಿತ ಇದೀಗ ಪೊಲೀಸರ ಮೊರೆ ಹೋಗಲು ನಿರ್ಧರಿಸಿದೆ.
ಕೆಂಗ್ರೆ ಜಾಕ್‌ವೆಲ್‌ನಿಂದ ನಗರಕ್ಕೆ ಬೀಡು ಕಬ್ಬಿಣದ ಪೈಪುಗಳ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಕಳೆದ ವರ್ಷ ಹೊಸದಾಗಿ ಪೈಪ್‌ಲೈನ್ ಅಳವಡಿಸಲಾಗಿದ್ದು, ಹಳೆಯ ಪೈಪುಗಳನ್ನು ಅಲ್ಲಿಯೇ ಬಿಡಲಾಗಿತ್ತು. ಆ ಹಳೆಯ ಪೈಪ್‌ಲೈನ್’ಗಳು ಇದೀಗ ಕಾಣುತ್ತಿಲ್ಲ. ವಾರದ ಹಿಂದೆ ಹೊರಜಿಲ್ಲೆಯ ವ್ಯಕ್ತಿಯೊಬ್ಬ 720ಮೀ ಉದ್ದದ 57 ಲಕ್ಷ ರೂ ಮೌಲ್ಯದ 120 ಪೈಪ್ ಕದ್ದಿರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಹಿಂದೆ ಕೆಲವರು ಪೈಪ್ ಬಗ್ಗೆ ನಗರಸಭೆಗೆ ಪ್ರಶ್ನಿಸಿದ್ದರು. ಆಗ, `ಅದು ಟೆಂಡರ್ ಆಗಿದೆ’ ಎಂದು ನಗರಸಭೆಯವರು ಹಾರಿಕೆ ಉತ್ತರ ನೀಡಿದ್ದರು. ಆದರೆ, ಈ ಬಗ್ಗೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಗೆ ಯಾವುದೇ ಮಾಹಿತಿ ಇರಲಿಲ್ಲ. ಸದ್ಯ ವಿರೋಧ ಪಕ್ಷದ ಸದಸ್ಯರು ಪೈಪ್ ಬಗ್ಗೆ ಸ್ಪಷ್ಠನೆ ನೀಡುವಂತೆ ಪಟ್ಟು ಹಿಡಿದರು. ಈ ವೇಳೆ ಪೈಪ್‌ಲೈನ್ ಕಳ್ಳತನ ನಡೆದಿರುವುದು ಅಧಿಕೃತವಾಗಿದೆ.
ಇನ್ನೂ ಪೈಪ್ ಕಳ್ಳತನ ವಿಷಯದಲ್ಲಿ ಕೆಲ ನಗರಸಭೆ ಸದಸ್ಯರು ಭಾಗಿಯಾಗಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದೆ. ಇದರಿಂದ ನಗರಸಭೆ ಸದಸ್ಯರು ತೀವೃ ಮುಜುಗರ ಅನುಭವಿಸುತ್ತಿದ್ದಾರೆ. ಈ ಆರೋಪದಿಂದ ಮುಕ್ತಿಪಡೆಯುವುದಕ್ಕಾಗಿ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ. ಪೈಪ್ ಕಳ್ಳತನ ಗೊಂದಲದ ವಿಷಯವಾಗಿ ನಗರಸಭೆ ಆಡಳಿತದಲ್ಲಿರುವ ಸದಸ್ಯರು ಹಾಗೂ ವಿರೋಧಿ ಬಣದ ಸದಸ್ಯರ ನಡುವೆ ವಾಗ್ವಾದ ನಡೆಯುತ್ತಿದೆ.
ಗಣೇಶನಗರ ಮುಖ್ಯರಸ್ತೆಯಲ್ಲಿದ್ದ ಪೈಪ್ ತೆಗೆಯಲು ಶಿವಮೊಗ್ಗದ ವ್ಯಕ್ತಿಗೆ ಟೆಂಡರ್ ಆಗಿದ್ದು, ಅವರು ನಗರಸಭೆಗೆ 7.8 ಲಕ್ಷ ರೂ ಹಣ ಪಾವತಿಸಿ 90ಮೀ ಪೈಪ್ ತೆಗೆದಿದ್ದಾರೆ. ಆದರೆ, ಕೆಂಗ್ರೆ ಜಾಕ್‌ವೆಲ್‌ನ ಪೈಪ್ ತೆಗೆಯಲು ಯಾರಿಗೂ ಟೆಂಡರ್ ಆಗಿಲ್ಲ. ಅದಾಗಿಯೂ ಅಲ್ಲಿನ ಪೈಪ್ ಕಣ್ಮರೆಯಾಗಿದೆ. ಹಾಡ ಹಗಲೇ ಕಬ್ಬಿಣ ಕಳ್ಳತನ ನಡೆದರೂ ಅದನ್ನು ಯಾರೂ ಪ್ರಶ್ನಿಸಿಲ್ಲ!