ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ ನಡೆದ ಅನ್ಯಾಯ ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
`2019ರಲ್ಲಿ ಅಸ್ವಿತ್ವಕ್ಕೆ ಬಂದ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಒಕ್ಕೂಟದ 19 ನಿರ್ದೇಶಕರ ಹುದ್ದೆಗೆ ಚುನಾವಣೆ ನಡೆಯಬೇಕಿತ್ತು. ಮಾರ್ಚ 2ರವರೆಗೆ 19 ಜನ ನಾಮಪತ್ರ ಸಲ್ಲಿಸಿದ್ದರು. ಮಾರ್ಚ 4ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದ್ದು, 9 ಜನ ಖುದ್ದು ಹಾಜರಾಗಿ ನಾಮಪತ್ರ ಹಿಂಪಡೆದಿದ್ದಾರೆ. ಆದರೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ಬೆಂಗಳೂರಿನಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವ ಗಣೇಶ ಭಟ್ಟ ಅವರು ನಾಮಪತ್ರ ಹಿಂಪಡೆದಿರುವ ಬಗ್ಗೆ ನಕಲಿ ದಾಖಲೆ ಸೃಷ್ಠಿಸಿದ್ದಾರೆ’ ಎಂಬುದು ಸರಸ್ವತಿ ಅವರ ಆರೊಪ.
`ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಒಕ್ಕೂಟಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದಾರೆ. ಚುನಾವಣಾ ನಿಯಮವನ್ನು ಉಲ್ಲಂಘಿಸಿದ್ದಾರೆ. ಆ ಮೂಲಕ ಸಹಕಾರಿ ಕ್ಷೇತ್ರಕ್ಕೆ ಅವರು ದ್ರೋಹ ಎಸಗಿದ್ದಾರೆ’ ಎಂದು ಪ್ರತಿಭಟನೆಯ ವೇಳೆ ಅವರು ದೂರಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ `ಗಣೇಶ ಭಟ್ಟ ಅವರು ಖುದ್ದು ಹಾಜರಾಗಿ ನಾಮಪತ್ರ ಹಿಂಪಡೆದಿರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ನನ್ನ ಅಧಿಕಾರ ಪ್ರಶ್ನಿಸುವ ಅರ್ಹತೆ ನಿಮಗಿಲ್ಲ ಎಂದು ನಿಂದಿಸಿದ್ದಾರೆ. ತಕರಾರು ಮಾಡಿದರೆ ನಿಮಗೂ ತೊಂದರೆಯಾಗುವುದು ನಿಶ್ಚಿತ’ ಎಂದು ಬೆದರಿಕೆ ಒಡ್ಡಿದ ಬಗ್ಗೆಯೂ ಆರೋಪಿಸಿದ್ದಾರೆ.
ಬುಧವಾರ ಬೆಳಗ್ಗೆ ಅವರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಗಾಂಧೀಜಿ ಫೋಟೋ ಜೊತೆ ಆಗಮಿಸಿ ಪ್ರತಿಭಟನೆ ನಡೆಸಿದರು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುವುದಾಗಿ ಮಾಧ್ಯಮಗಳ ಎದುರು ಮಾತನಾಡಿದರು.