ತಮ್ಮ ರಾಜಕೀಯ ಜೀವನದಲ್ಲಿ 16ನೇ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಉತ್ತರ ಕನ್ನಡ ಜಿಲ್ಲೆಗೆ ಕೆಲ ಯೋಜನೆಗಳನ್ನು ಘೋಷಿಸಿದ್ದಾರೆ. ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯ ಪ್ರದೇಶವನ್ನು ಒಳಗೊಂಡ ಜಿಲ್ಲೆಗೆ ಇಲ್ಲಿನ ಕೆಲ ಯೋಜನೆಗಳು ಆಶಾದಾಯಕ ಬೆಳವಣಿಗೆಯೆನಿಸಿದೆ.
ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಿಸುವುದಾಗಿ ಅವರು ಹೇಳಿದ್ದಾರೆ. ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ ಸಿದ್ದಿ ಸಮುದಾಯದವರನ್ನು ಒಳಗೊಂಡು ಸೋಲಿಗ, ಹಲಸರು, ಜೇನು ಕುರುಬ, ಗೌಡಲು, ಕುಡಿಯ, ಮಲೆಕುಡಿಯ, ಕಾಡುಕುರುಬ, ಇರುಳಿಗ, ಕೊರಗ, ಬೆಟ್ಟಕುರುಬ, ಯರವ, ಪಣಿಯನ್ ಇತ್ಯಾದಿ ಪರಿಶಿಷ್ಟ ಪಂಗಡದ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ ಅನುದಾನ ಘೋಷಿಸಿದ್ದಾರೆ. ಇದರೊಂದಿಗೆ ಈ ಸಮುದಾಯದವರಿಗೆ ರಾಜ್ಯ ಸಿವಿಲ್ ಸೇವೆಯಲ್ಲಿ ಹೆಚ್ಚಿನ ಅವಕಾಶ ಕೊಡಲು ನೇರ ನೇಮಕಾತಿ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆಗೆ ಅನುಕೂಲವಾಗುವಂತೆ ಕೊಂಡಿ ರಸ್ತೆಗಳನ್ನು ನಬಾರ್ಡ ಸಹಯೋಗದಲ್ಲಿ ಅಭಿವೃದ್ಧಿಪಡಿಸಲು ಸಿದ್ದರಾಮಯ್ಯ 30 ಕೋಟಿ ರೂ ಒದಗಿಸುವುದಾಗಿಯೂ ಬಜೆಟಿನಲ್ಲಿ ಹೇಳಲಾಗಿದೆ. ಇದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆಗಳಿಗೆ ಯೋಜನೆ ರೂಪಿಸುವ ಬಗ್ಗೆ ಸರ್ಕಾರ ಚಿಂತಿಸಿದೆ. ಕರಾವಳಿಯಲ್ಲಿನ ಕಡಲು ಕೊರತ ತಡೆಗೆ ಚೆನೈ ಐಟಿಐ ಅವರಿಂದ `ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್’ ಸಿದ್ಧಪಡಿಸಿರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆ ಮೂಲಕ ಹಂತ ಹಂತವಾಗಿ ಕಡಲ ಕೊರತ ತಡೆಯುವ ಭರವಸೆ ನೀಡಿದ್ದಾರೆ. ಬಯಲುಸೀಮೆ, ಮಲೆನಾಡು ಹಾಗೂ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಗಳಿಗೆ ಒಟ್ಟಾರೆಯಾಗಿ 83 ಕೋಟಿ ರೂ ಅನುದಾನವನ್ನು ಒದಗಿಸುವ ಬಗ್ಗೆ ಬಜೆಟಿನಲ್ಲಿ ನಮೂದಿಸಲಾಗಿದೆ. ಕಾರವಾರ ನೌಕಾನೆಲೆಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಗೆ ಈ ಸಾಲಿನಲ್ಲಿ ಅನುದಾನ ಒದಗಿಸಿ ಕಾಮಗಾರಿ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು ಉನ್ನತ್ತಿಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮ ನಡೆಸುವ ಬಗ್ಗೆಯೂ ಸರ್ಕಾರಕ್ಕೆ ಚಿಂತನೆಯಿದೆ. ಉತ್ತರ ಕನ್ನಡ ಸೇರಿ ಆರು ಜಿಲ್ಲೆಗಳಲ್ಲಿನ ಭೂ ಕುಸಿತ ತಡೆಗೆ 200 ಕೋಟಿ ರೂ ಮೀಸಲಿಡುವುದಾಗಿ ಬಜೆಟ್ ಅಂಕಿ-ಅoಶಗಳು ಹೇಳಿಕೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿ 200 ಕೋಟಿ ರೂ ವೆಚ್ಚದಲ್ಲಿ ಸಮುದ್ರ ಕೊರೆತ ತಗ್ಗಿಸುವುದು ಹಾಗೂ ರಾಜ್ಯದಲ್ಲಿ ಪ್ರಗತಿಯಲ್ಲಿರುವ 42 ಸ್ವಯಂಚಾಲಿತ ಪರೀಕ್ಷಾ ಪಥಗಳ ನಿರ್ಮಾಣವನ್ನು ಸದರಿ ಸಾಲಿನಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಇದರೊoದಿಗೆ 2025-26ನೇ ಸಾಲಿನಲ್ಲಿ ಹೊನ್ನಾವರ, ಚಾಮರಾಜನಗರ ಮತ್ತು ಚಿತ್ರದುರ್ಗದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಸ್ವಯಂಚಾಲಿತ ಪರೀಕ್ಷಾ ಪಥಗಳನ್ನು ನಿರ್ಮಾಣ ಉದ್ದೇಶಕ್ಕಾಗಿ 12 ಕೋಟಿ ರೂ ಅನುದಾನ ನೀಡಲು ಬಜೆಟ್ ನಿರ್ಧರಿಸಿದೆ. ಹಳಿಯಾಳದಲ್ಲಿ ಕೆರೆ ತುಂಬಿಸುವ ಯೋಜನೆಗೆ ಸಹ ಬಜೆಟ್ ಒತ್ತು ನೀಡಿದೆ.