`ಕೃಷಿ ಬಿಕ್ಕಟ್ಟು, ಗ್ರಾಮೀಣ ನಿರುದ್ಯೋಗ, ಬೆಲೆ ಏರಿಕೆ ಬವಣೆಗೆ ಪರಿಹಾರ ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ವಿಫಲವಾಗಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹೇಳಿದ್ದಾರೆ.
`ರಾಜ್ಯಾದ್ಯಂತ ರೈತ-ಕೃಷಿಕೂಲಿಕಾರರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದೆ. ಭೂಮಿ ಪ್ರಶ್ನೆ, ವಲಸೆ-ಮರುವಲಸೆ ಸಂಕಟಗಳು ನೂರಾರಿವೆ. ಗ್ರಾಮೀಣ ಭಾಗದಲ್ಲಿನ ನಿರುದ್ಯೋಗ ಸಾಲ ಸಮಸ್ಯೆ ಬಗೆಹರಿಸಲು ಬಜೆಟ್’ನಲ್ಲಿ ಏನೂ ಇಲ್ಲ’ ಎಂದವರು ಅಭಿಪ್ರಾಯ ಹಂಚಿಕೊAಡಿದ್ದಾರೆ. `ಉದ್ದೇಶ ಮತ್ತು ಸ್ವರೂಪಗಳ ಪ್ರಸ್ತಾಪ ಇಲ್ಲದೇ ಹೊಸ ಭೂ ಕಂದಾಯ ಕಾಯ್ದೆಯ ಘೋಷಣೆ ಮಾಡಿರುವುದು ಸರಿಯಲ್ಲ. ಕೃಷಿ ಭೂಮಿ ಪಹಣಿಗಳಿಗೆ ಆಧಾರ್ ಜೋಡಿಸಿ ಡಿಜಿಟಲೀಕರಣಗೊಳಿಸುವುದು ಸೈಬರ್ ಅಪರಾಧ ಸಾಧ್ಯತೆ ಹೆಚ್ಚಿಸಿದೆ. ಹೀಗಾಗಿ ಯಾವುದೇ ರೀತಿಯ ತೊಂದರೆಗೆ ರೈತರನ್ನು ಸಿಲುಕಿಸುವುದಿಲ್ಲ ಎಂದು ಸ್ಪಷ್ಟ ಶ್ವೇತಪತ್ರ ಹೊರಡಿಸದೇ ಇಂಥ ಜೋಡಣೆ ಕೆಲಸಕ್ಕೆ ಮುಂದಾಗಬಾರದು’ ಎಂದವರು ಕರ್ನಾಟಕ ಪ್ರಾಂತ ರೈತ ಸಂಘದ ಮೂಲಕ ಆಗ್ರಹಿಸಿದ್ದಾರೆ.
`ನವ ಉದಾರೀಕರಣ ನೀತಿಗಳಿಗೆ ಮಣೆ ಹಾಕಿರುವ ಈ ಬಜೆಟ್ ಕೂಡ ಕೃಷಿ ಉತ್ಪಾದನೆ ಹಾಗೂ ಕೃಷಿ ಭೂಮಿ ರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಾಲಕ್ಕೆ ತುತ್ತಾಗಿರುವ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯಗಳಿಗೆ ಯಾವುದೇ ಪರಿಣಾಮಕಾರಿ ಪರಿಹಾರ ಒದಗಿಸಿಲ್ಲ. ಕೃಷಿಕರ ಆದಾಯ ಮತ್ತು ಜೀವನ ಭದ್ರತೆ ಹಾಗೂ ಕೃಷಿ ಉತ್ಪಾದನೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬಗರ್ ಹುಕುಂ, ಅರಣ್ಯ ಸಾಗುವಳಿ, ಗೇಣಿ ರೈತರ ಕಲ್ಯಾಣವನ್ನು ಮತ್ತು ಅವರ ಹಕ್ಕು ಪತ್ರದ ಹಕ್ಕು ಬಗ್ಗೆಯೂ ಉಲ್ಲೇಖಗಳಿಲ್ಲ. ಬಲವಂತದ ಭೂ ಸ್ವಾಧೀನದ ವಿರುದ್ಧ ರಕ್ಷಣೆ ನೀಡುವಂತೆ ಕೃಷಿ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಪ್ರೀಪೇಡ್ ಮೀಟರ್ ಅಳವಡಿಸುವ ಕೇಂದ್ರದ ವಿದ್ಯುತ್ ಖಾಸಗೀಕರಣ ನೀತಿಗೆ ನಿರಾಕರಣೆ ಆಗಿಲ್ಲ’ ಎಂದವರು ವಿವರಿಸಿದ್ದಾರೆ.
`ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖಾತರಿ ಖರೀದಿಗೆ ವ್ಯವಸ್ಥೆ, ಸಾಲಭಾಧೆಯಿಂದ ಆತ್ಮಹತ್ಯೆಗೆ ತುತ್ತಾಗದಂತೆ ಕೇರಳ ಮಾದರಿಯಲ್ಲಿ ಋಣಮುಕ್ತ ಕಾಯ್ದೆ ಜಾರಿ, ಕೈಗಾರಿಕಾ ಪ್ರದೇಶಾಭಿವೃದ್ಧಿ ಹೆಸರಿನಲ್ಲಿ ಭೂ ಮಾಪಿಯಾದ ಚಟುವಟಿಕೆಗಳನ್ನು ನಿಯಂತ್ರಣ ಸೇರಿ ಹಲವು ಅಂಶಗಳ ಬಗ್ಗೆ ಬಜೆಟ್ ಪೂರ್ವ ಪ್ರತಿಭಟನೆ ಮೂಲಕ ಒತ್ತಾಯಿಸಿದರೂ ಅವುಗಳನ್ನು ಕೆಡಗಣಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಆಗಿರುವ ತೆರಿಗೆ ಪಾಲಿನಲ್ಲಿ ವಂಚನೆ, ಅಭಿವೃದ್ಧಿ ಅನುದಾನದಲ್ಲಿ ತಾರತಮ್ಯ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸದಿರುವುದು ಹಾಗೂ ಗ್ಯಾರಂಟಿ ಯೋಜನೆಗಳಿಂದ ಇನ್ನಿತರ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದ್ದರೂ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆಯಂಥ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸದಿರುವುದು ಖಂಡನೀಯ. ಕೇವಲ ಗ್ಯಾರಂಟಿ ಯೋಜನೆಗಳು ರಾಜ್ಯದ ಅರ್ಥಿಕ ಅಭಿವೃದ್ದಿಗೆ ಯಾವುದೇ ಪರಿಣಾಮಕಾರಿ ಕೊಡುಗೆ ನೀಡಲು ಸಾಧ್ಯವಿಲ್ಲ’ ಎಂದು ಶಾಂತರಾಮ ನಾಯಕ ಅವರು ಅಭಿಪ್ರಾಯಪಟ್ಟಿದ್ದಾರೆ.
`ಕಳೆದ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಪೈಕಿ ಕರಾಳ ಕೃಷಿ ಕಾಯ್ದೆ ಹಾಗೂ ಭೂ ಸ್ವಾಧೀನ ಕಾಯ್ದೆಗಳ ರದ್ದತಿ ಘೋಷಣೆಯನ್ನು ಈ ಬಜೆm ಮಾಡಿಲ್ಲ. ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಪ್ರಸ್ತಾಪ ಅಪಾಯಕಾರಿಯಾಗಿದೆ. ಈಗಾಗಲೇ ಎಪಿಎಂಪಿ ಕಾಯ್ದೆಗಳನ್ನು ದುರ್ಬಲಗೊಳಿಸಿರುವ ಕಾರಣ ಹಾಗೂ ಖಾಸಗಿ ಸಗಟು ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸಿರುವ ಕಾರಣ ಮತ್ತಷ್ಟು ತೊಂದರೆ ರೈತರಿಗೆ ಉಂಟಾಗಲಿದೆ. ಕೂಡಲೇ ಖಾಸಗಿ ಕೃಷಿ ಮಾರುಕಟ್ಟೆ ಪರ ಧೋರಣೆ ಕೈ ಬಿಟ್ಟು ಎಪಿಎಂಸಿ ಮಾರುಕಟ್ಟೆಗಳನ್ನು ಬಲಪಡಿಸಬೇಕು. ಭೂ ಸುಧಾರಣೆ ಕಾಯ್ದೆ 2020ಸೇರಿದಂತೆ ಎಲ್ಲಾ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ.