ಹೊನ್ನಾವರ, ಮುಂಡಗೋಡ ಹಾಗೂ ಭಟ್ಕಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹೊನ್ನಾವರದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರು ಜನ ಹಾಗೂ ಮುಂಡಗೋಡಲ್ಲಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮವಾಗಿದೆ. ಭಟ್ಕಳದಲ್ಲಿ ಮಟ್ಕಾ ಆಡಿಸುವವನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಹೊನ್ನಾವರದ ಭಾಸ್ಕೇರಿ ಗ್ರಾಮದ ಗುಡ್ಡಬಾಳ ಸ್ಮಶಾನದ ಬಳಿ ಮಾರ್ಚ 5ರ ಸಂಜೆ ಹುಂಜಗಳ ಕಾದಾಟಕ್ಕೆ ಬಿಡಲಾಗಿತ್ತು. ಗೆಲ್ಲುವ ಹುಂಜದ ಮೇಲೆ ಕೆಲವರು ಹಣ ಕಟ್ಟಿ ಜೂಜಾಟ ನಡೆಸುತ್ತಿದ್ದರು. ಇದನ್ನು ಅರಿತ ತನಿಖಾ ಪಿಎಸ್‌ಐ ರಾಜಶೇಖರ್ ವಂದಲಿ ದಾಳಿ ನಡೆಸಿದರು. ಆಗ ದೊಡ್ಡಹಿತ್ಲ ಹೊಸಕಾಳಿಯ ಮಾರುತಿ ನಾಯ್ಕ, ಮಹೇಂದ್ರ ಮೊಗೇರ, ಮೇಲಿನ ಇಡಗುಂಜಿಯ ವಿನಾಯಕ ನಾಯ್ಕ, ಜಗದೀಶ ನಾಯ್ಕ, ರಾಘವೇಂದ್ರ ನಾಯ್ಕ, ಭಾಸ್ಕೇರಿಯ ಮಂಜುನಾಥ ಮುಕ್ರಿ ಅಲ್ಲಿ ಕಾಣಿಸಿದರು.
ಆ ಪೈಕಿ ರಾಘವೇಂದ್ರ ನಾಯ್ಕ, ಭಾಸ್ಕೇರಿಯ ಮಂಜುನಾಥ ಮುಕ್ರಿ ಓಡಿ ಹೋಗಿ ತಪ್ಪಿಸಿಕೊಂಡರು. ಉಳಿದವರು ಹುಂಜದ ಜೊತೆ ಅಲ್ಲಿಯೇ ಸಿಕ್ಕಿಬಿದ್ದರು. 400ರೂ ಮೌಲ್ಯದ ಕೋಳಿಯ ಜೊತೆ ಅವರ ಬಳಿಯಿದ್ದ 3900ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಆ ಆರು ಜನರ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.
ಮುಂಡಗೋಡದ ಇಂದಿರಾ ನಗರದ ಹಳ್ಳದ ಪಕ್ಕದ ಖಾಲಿ ಜಾಗದಲ್ಲಿ ಅದೇ ಊರಿನ ರಫಿಕ್‌ಸಾಬ್ ಹಿಂಡಿಸಗಿರಿ, ಸಂತೋಷ ಬೋವಿ, ಲಕ್ಷö್ಮಣ ಬೋವಿವಡ್ಡರ್ ಹಾಗೂ ಯಲ್ಲಪ್ಪ ಮಾನೆ ಅಂದರ್ ಬಾಹರ್ ಆಡುತ್ತಿದ್ದರು. ಮಾರ್ಚ 5ರ ರಾತ್ರಿ 1.30ರ ಆಸುಪಾಸಿನಲ್ಲಿ ಅಲ್ಲಿಗೆ ಲಗ್ಗೆಯಿಟ್ಟ ಮುಂಡಗೋಡು ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ಮೂವರನ್ನು ಬಂಧಿಸಿದರು. ಆದರೆ, ಯಲ್ಲಪ್ಪ ಮಾನೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಪರಾರಿಯಾದರು. ಸಿಕ್ಕಿಬಿದ್ದವರ ಬಳಿಯಿದ್ದ 4510ರೂ ಹಣ, 52 ಇಸ್ಪಿಟ್ ಎಲೆಯನ್ನು ಪೊಲೀಸರು ವಶಕ್ಕೆ ಪಡೆದರು. ಎಲ್ಲರ ಹೆಸರು ವಿವರದೊಂದಿಗೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.
ಭಟ್ಕಳದ ಸಂಶುದ್ಧೀನ್ ಸರ್ಕಲ್ ಬಳಿಯ ಹೊಟೇಲ್ ಎದುರು ಮಟ್ಕಾ ಆಡಿಸುತ್ತಿದ್ದ ನಾಗೇಂದ್ರ ಗೊಂಡ ವಿರುದ್ಧ ಪೊಲೀಸರು ಮಾರ್ಚ 6ರಂದು ಪ್ರಕರಣ ದಾಖಲಿಸಿದರು. ಗೊಂಡರಕೇರಿ ಕಾರಗದ್ದೆಯ ನಾಗೇಂದ್ರ ಗೊಂಡ ತಮ್ಮ ಬೀಡಾ ಅಂಗಡಿಯಲ್ಲಿ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದರು. ಅವರ ಬಳಿಯಿದ್ದ 1100ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಪಿಎಸ್‌ಐ ಶಾಂತಿನಾಥ ಪಾಸಾನೆ ಕಾನೂನು ಕ್ರಮ ಜರುಗಿಸಿದರು.