ಕೊಂಕಣ ರೈಲ್ವೆಯಲ್ಲಿ ಟ್ರಾಕ್‌ಮ್ಯಾನ್ ಆಗಿದ್ದ ಸಂಜಯಕುಮಾರ ಶೇರುಗಾರ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಕುಂದಾಪುರದ ಸಂಜಯಕುಮಾರ್ ಅವರು ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೆ 6ರಂದು ಕರ್ತವ್ಯ ಮುಗಿಸಿ ಅವರು ಮನೆ ಕಡೆ ಹೊರಟಿದ್ದರು. ಭಟ್ಕಳದಿಂದ ಶಿರೂರಿಗೆ ಬೈಕ್ ಮೂಲಕ ಅವರು ಹೋಗುತ್ತಿದ್ದರು. ಬೆಳಕೆ ಹೆದ್ದಾರಿಯ ಬಳಿ ಅವರ ಬೈಕ್ ನಿಯಂತ್ರಣ ತಪ್ಪಿತು.
ಪರಿಣಾಮ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡರು. ಬೈಕಿನಿಂದ ಬಿದ್ದ ರಭಸಕ್ಕೆ ಗಟಾರದ ಆಚೆ ಉರುಳಿದ್ದರು. ಅವರು ಬಿದ್ದಿರುವುದನ್ನು ನೋಡಿದ ಜನ ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ, ಅಲ್ಲಿಯೇ ಅವರು ಸಾವನಪ್ಪಿದ್ದರು.
ಈ ಬಗ್ಗೆ ರೈಲ್ವೆ ನಿಗಮದ ಜ್ಯುನಿಯರ್ ಇಂಜಿನಿಯರ್ ಪಾಯಸ್ ತೊಮ್ಮಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.