ಬನವಾಸಿ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಇಂದುಧರ ಕ್ಷತ್ರಿಯ (27) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯ ಇಂದುಧರ ಕ್ಷತ್ರಿಯ (27) ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಉದ್ಯೋಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ 5.30ಕ್ಕೆ ಅವರು ಲಲಿತಾ ಎಂಬಾತರನ್ನು ಕೂರಿಸಿಕೊಂಡು ಬೈಕಿನಲ್ಲಿ ಹೊರಟಿದ್ದರು. ಬೇಗನೇ ಬನವಾಸಿ ತಲುಪುವುದಕ್ಕಾಗಿ ಅವರು ದಾಸನಕೊಪ್ಪ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು.
ಕನಕಾಪುರ ತಿರುವಿನಲ್ಲಿ ಬೈಕ್ ಅವರ ನಿಯಂತ್ರಣ ತಪ್ಪಿತು. ಪರಿಣಾಮ ಬೈಕಿನ ಜೊತೆ ಅವರು ಗಟಾರಕ್ಕೆ ಬಿದ್ದರು. ಹಿಂಬದಿ ಕೂತಿದ್ದ ಲಲಿತಾ ಅವರು ಕಾಲಿಗೆ ಗಾಯ ಮಾಡಿಕೊಂಡಿದ್ದರು. ಅಪಘಾತದ ಬಗ್ಗೆ ವಿಚಾರಿಸಲು ಲಲಿತಾ ಅವರು ಇಂದುಧರ ಅವರನ್ನು ಮಾತನಾಡಿಸಿದರು. ಆದರೆ, ಇಂದುಧರ್ ಮಾತನಾಡಲಿಲ್ಲ.
ಈ ವೇಳೆ ಇಂದುಧರ ಅವರ ತಮ್ಮ ಚಿರಂಜೀವಿ ಬೆಳ್ಳನಕೇರಿಯ ಗಣಪತಿ ಚಕ್ರಸಾಲಿ ಅವರಿಗೆ ಫೋನ್ ಮಾಡಿದರು. `ತಮ್ಮ ಅಣ್ಣ ಫೋನ್ ರಿಸಿವ್ ಮಾಡುತ್ತಿಲ್ಲ. ನೋಡಿ ಬಾ’ ಎಂದು ಹೇಳಿದರು. ಆ ವೇಳೆಗಾಗಲೇ ಲಲಿತಾ ಅವರು ಗಣಪತಿ ಚಕ್ರಸಾಲಿ ಅವರಿಗೆ ಫೋನ್ ಮಾಡಿ ಅಪಘಾತದ ವಿಷಯ ವಿವರಿಸಿದರು.
ತಕ್ಷಣ ಗಣಪತಿ ಚಕ್ರಸಾಲಿ ಅಲ್ಲಿಗೆ ಭೇಟಿ ನೀಡಿದರು. ಗಟಾರದೊಳಗೆ ತಲೆ ಕೆಳಗಾಗಿ ಇಂದುಧರ್ ಬಿದ್ದಿದ್ದರು. ಆಂಬುಲೆನ್ಸಿನವರು ಆಗಲೇ ಬಂದಿದ್ದರು. ಇಂದುಧರ ಸಾವನಪ್ಪಿದ ಬಗ್ಗೆ ಆರೋಗ್ಯ ಸಿಬ್ಬಂದಿ ತಿಳಿಸಿದರು. ಹೀಗಾಗಿ ಗಾಯಗೊಂಡ ಲಲಿತಾ ಅವರನ್ನು ಗಣಪತಿ ಅವರು ಆಸ್ಪತ್ರೆಗೆ ದಾಖಲಿಸಿದರು. ಅಪಘಾತದ ಬಗ್ಗೆ ಗಣಪತಿ ಚಕ್ರಸಾಲಿ ಅವರು ಪೊಲೀಸರಿಗೆ ಮಾಹಿತಿ ನೀಡಿ, ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.



