ಕುಮಟಾದ ಗಣೇಶ ಭಂಡಾರಿ ಅವರು ಬಸ್ ನಿಲ್ದಾಣದ ಬಳಿ ತಮ್ಮ ಬ್ಯಾಗ್ ಕಳೆದುಕೊಂಡಿದ್ದಾರೆ. ಆ ಬ್ಯಾಗ್ ಕಳೆದ ಘಳಿಗೆಯಿಂದ ಅವರ ಗ್ರಹಚಾರ ಕೆಟ್ಟಿದ್ದು, ಇದೀಗ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ!
ಫೆಬ್ರವರಿ 5ರಂದು ನೀಲ್ಕೋಡ ಯಲವಳ್ಳಿಯ ಗಣೇಶ ಭಂಡಾರಿ (53) ಕುಮಟಾ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬೈಕಿನಲ್ಲಿ ಹೋಗುತ್ತಿದ್ದರು. ಅವರ ಜೊತೆಯಿದ್ದ ಬ್ಯಾಗ್ ಈ ವೇಳೆ ಕಾಣೆಯಾಯಿತು. ಆ ಬ್ಯಾಗಿನಲ್ಲಿ ಐಸಿಐಸಿಐ ಬ್ಯಾಂಕಿನ ಹಾಗೂ ಎಸ್‌ಬಿಐ ಬ್ಯಾಂಕಿನ ಎರಡು ಚೆಕ್ ಪುಸ್ತಕಗಳಿದ್ದವು.
ಕಳೆದ ಬ್ಯಾಗು ಕೊಡ್ಕಣಿಯ ಕಮಲಾಕರ ದೇಶಭಂಡಾರಿ (64) ಅವರಿಗೆ ಸಿಕ್ಕಿತು. ನಿವೃತ್ತ ನೌಕರರಾಗಿರುವ ಕಮಲಾಕರ ದೇಶಭಂಡಾರಿ ಆ ಬ್ಯಾಗನ್ನು ವಾರಸುದಾರರಿಗೆ ಮರಳಿಸುವ ಪ್ರಯತ್ನ ಮಾಡಲಿಲ್ಲ. ಬದಲಾಗಿ, ಆ ಬ್ಯಾಗಿನೊಳಗಿದ್ದ ಚೆಕ್’ಗೆ ನಕಲಿ ಸಹಿ ಮಾಡಿದರು. 15 ಲಕ್ಷ ರೂ ಹಣವನ್ನು ನಮೂದಿಸಿದರು. ಎರಡು ತಿಂಗಳ ಹಿಂದಿನ ತಾರೀಕು ನಮೂದಿಸಿ ಚೆಕ್’ನ್ನು ಬ್ಯಾಂಕಿಗೆ ಕೊಟ್ಟರು.
ಆದರೆ, ಬ್ಯಾಂಕಿನವರು ಆ ಚೆಕ್ ಪುರಸ್ಕರಿಸಲಿಲ್ಲ. ಚೆಕ್ ಅಮಾನ್ಯಗೊಳಿಸಿದರು. ಇದೇ ಕಾರಣದಿಂದ ಕಮಲಾಕರ ದೇಶಭಂಡಾರಿ ವಕೀಲರ ಮೂಲಕ ಗಣೇಶ ಭಂಡಾರಿ ಅವರಿಗೆ ನೋಟಿಸ್ ಕಳುಹಿಸಿದರು. ಬ್ಯಾಗ್ ಕಳೆದಿರುವ ನೋವಿನಲ್ಲಿದ್ದ ಗಣೇಶ ಭಂಡಾರಿ ವಕೀಲರಿಂದ ಬಂದ ನೋಟಿಸ್ ನೋಡಿ ಕಂಗಾಲಾದರು.
ತಮಗಾದ ಅನ್ಯಾಯ ಅರಿತು ಕುಮಟಾ ಪೊಲೀಸ್ ಠಾಣೆಗೆ ತೆರಳಿದರು. ಅಲ್ಲಿನ ಅಧಿಕಾರಿಗಳಿಗೆ ವಿವರವಾದ ಮಾಹಿತಿ ನೀಡಿ ದೂರು ದಾಖಲಿಸಿದರು. ಕಮಲಾಕರ ದೇಶಭಂಡಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.