ಶಾಲಾ ಮಕ್ಕಳನ್ನು ಮನೆಗೆ ಕರೆತರಲು ಹೊರಟಿದ್ದ ಶಿರಸಿಯ ಮಹಿಳೆಯೊಬ್ಬರ ಮೇಲೆ ಆಗಂತುಕರು ದಾಳಿ ಮಾಡಿದ್ದಾರೆ. ಆ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ಶ್ವೇತಾ ಜಗದೀಶ ಭಟ್ಟ (33) ಅವರು ಸದ್ಯ ಶಿರಸಿ ಯಡಳ್ಳಿಯ ಮುಂಡಗೇಸರದ ಗಣೇಶ ದೇವಸ್ಥಾನ ಹತ್ತಿರದ ತವರುಮನೆಯಲ್ಲಿದ್ದರು. ಮಾರ್ಚ 6ರ ಮಧ್ಯಾಹ್ನ ಅವರು ಶಾಲೆಗೆ ಹೋದ ಮಕ್ಕಳನ್ನು ಮನೆಗೆ ತರುವ ಸಿದ್ಧತೆ ನಡೆಸಿದ್ದರು. ಮನೆಯಿಂದ 200ಮೀ ದೂರ ಹೊರಟಾಗ ಅವರಿಗೆ ಇಬ್ಬರು ಅಪರಿಚಿತರು ಎದುರಾದರು. ಅವರನ್ನು ನೋಡಿಯೂ ನೋಡದಂತೆ ತಲೆ ತಗ್ಗಿಸಿಕೊಂಡು ಶ್ವೇತಾ ಭಟ್ಟ ಅವರು ಮುಂದೆ ಸಾಗಿದರು.
ನಂತರ ಬೈಕಿನಲ್ಲಿ ಹಿಂಬಾಲಿಸಿಕೊoಡು ಬಂದ ಆ ಆಘಂತುಕರು ಶ್ವೇತಾ ಭಟ್ಟ ಅವರ ಕತ್ತಿನಲ್ಲಿದ್ದ ಮಾಂಗಲ್ಯದ ಸರ ಕಿತ್ತು ಪರಾರಿಯಾದರು. ಬೈಕ್ ಓಡಿಸುತ್ತಿದ್ದವ ಹೆಲ್ಮೆಟ್ ಧರಿಸಿದ್ದು, ಹಿಂದೆ ಕೂತಿದ್ದವ ಮಾಸ್ಕ ಧರಿಸಿರುವುದನ್ನು ಶ್ವೇತಾ ಭಟ್ಟ ಗಮನಿಸಿದರು. ಆದರೆ, ಬೈಕಿನ ನೋಂದಣಿ ಸಂಖ್ಯೆ ಸರಿಯಾಗಿ ಕಾಣಲಿಲ್ಲ. ಆದರೆ, ಮನೆಯಿಂದ ಹೊರಡುವಾಗಲೇ ಆ ಇಬ್ಬರು ಆಘಂತುಕರನ್ನು ನೋಡಿದ್ದ ಕಾರಣ ಅವರ ಮುಖ ನೆನಪಿಟ್ಟುಕೊಂಡಿದ್ದರು.
15 ವರ್ಷದ ಹಿಂದೆ ಮಾಡಿಸಿದ್ದ 25 ಗ್ರಾಂ ತೂಕದ ಚಿನ್ನದ ಸರ ಅದಾಗಿದ್ದು, 1.25 ಲಕ್ಷ ರೂ ಬೆಲೆ ಬಾಳುತ್ತದೆ. ಈ ಸರ ಕದ್ದವರು ಮುಂಡಗೇಸರ ರಸ್ತೆಯಿಂದ ಶಿರಸಿ-ಸಿದ್ದಾಪುರ ಕಡೆ ಬೈಕ್ ಓಡಿಸಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕೂಡಲೇ ತಮ್ಮ ಪತಿಗೆ ಫೋನ್ ಮಾಡಿದ ಶ್ವೇತಾ ಭಟ್ಟ ನಡೆದ ವಿದ್ಯಮಾನಗಳ ಬಗ್ಗೆ ವಿವರಿಸಿದರು. ತಾಯಿ ಜೊತೆಗೂ ಚರ್ಚಿಸಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆ ಸರಗಳ್ಳರ ಹುಡುಕಾಟ ನಡೆಸಿದ್ದಾರೆ.