ಶಿರೂರು ಗುಡ್ಡ ಕುಸಿತದಿಂದ ಮಾಲಕರನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಕಾರವಾರದಲ್ಲಿ ನಡೆದ ಸೈಬರ್ ಅಪರಾಧ ಜಾಗೃತಿ ಜಾಥಾದಲ್ಲಿ 5ಕಿಮೀ ಓಡಿ ಪದಕ ಪಡೆದಿದೆ!
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ 2024ರ ಜುಲೈನಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿತ್ತು. ಅಲ್ಲಿ ಅಂಗಡಿ ಹೊಂದಿದ್ದ ಲಕ್ಷ್ಮಣ ನಾಯ್ಕ ಕುಟುಂಬದವರು ಸೇರಿ ಒಟ್ಟು 11 ಜನ ಸಾವನಪ್ಪಿದ್ದರು. ಈ ದುರಂತದಲ್ಲಿ ಲಕ್ಷ್ಮಣ ನಾಯ್ಕ ಅವರು ಸಾಕಿದ್ದ ನಾಯಿ ಅನಾಥವಾಗಿದ್ದು, ಕಾರ್ಯಾಚರಣೆ ವೇಳೆ ಅಲ್ಲಿಯೇ ಇದ್ದು ಮಾಲಕರ ಹುಡುಕಾಟ ನಡೆಸಿತ್ತು. ನಾಯಿ ನಿಷ್ಠೆ ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅದನ್ನು ತಮ್ಮ ಮನೆಗೆ ತಂದು ಸಾಕಿದ್ದರು. ಆ ನಾಯಿಗೆ ಪ್ರಥ್ವಿ ಎಂದು ಮರು ನಾಮಕರಣ ಮಾಡಿದ್ದರು. ಪೊಲೀಸ್ ಇಲಾಖೆಯಿಂದ ಆ ನಾಯಿಗೆ ತರಬೇತಿ ಕೊಡಿಸಿದ್ದರು.
ಭಾನುವಾರ ಬೆಳಗ್ಗೆ ಕಾರವಾರದಲ್ಲಿ ಸೈಬರ್ ಅಪರಾಧ ಹಾಗೂ ಮಾದಕ ದ್ರವ್ಯ ವಿರೋಧಿಸುವ ಜನ ಜಾಗೃತಿಗಾಗಿ ಪೊಲೀಸ್ ಇಲಾಖೆ 5ಕಿಮೀ ಓಟದ ಮ್ಯಾರಥಾನ್ ಆಯೋಜಿಸಿತ್ತು. ಎಂ ನಾರಾಯಣ ಅವರ ಜೊತೆಗೆ ಬಂದ ನಾಯಿ ಎಲ್ಲರೊಡನೆ 5ಕಿಮೀ ಓಡಿ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿತು. ಈ ಹಿನ್ನಲೆ ಆ ಶ್ವಾನವನ್ನು ವೇದಿಕೆಗೆ ಕರೆಯಿಸಿ ಶಾಸಕ ಸತೀಶ್ ಸೈಲ್ ಪದಕ ಪ್ರದಾನ ಮಾಡಿದರು.
ಈ ಓಟದಲ್ಲಿ ಪುರುಷ ವಿಭಾಗದಲ್ಲಿ ಕಾರ್ತಿಕ್ ಆರ್ ನಾಯ್ಕ ಪ್ರಥಮ ಬಹುಮಾನ ಪಡೆದರು. ಸಂದೀಪ್ ಪೂಜರ್ ದ್ವಿತೀಯ, ಗುರುರಾಜ್ ಹೆಗಡೆ ತೃತೀಯ ಬಹುಮಾನ ಸ್ವೀಕರಿಸಿದರು. ಮಹಿಳಾ ವಿಭಾಗದಲ್ಲಿ ಪೂರ್ವಿ ಟಿ ಹರಿಕಂತ್ರ ಪ್ರಥಮ, ಸುಪ್ರಿತಾ ಸಿ ಚನ್ನಯ್ಯ ದ್ವಿತೀಯ, ಸಾವಿತ್ರಿ ಮೀರಾಶಿ ತೃತೀಯ ಸ್ಥಾನ ಪಡೆದರು. ಸಾವಿರಾರು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.
`ಪ್ರತಿಯೊಬ್ಬರು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ’ ಎಂದು ಜಿಲ್ಲಾಧಿಕಾರಿ ಕೆ ಲಕ್ಮೀಪ್ರಿಯಾ ಹೇಳಿದರು. ಡ್ರಗ್ಸ್ ಅಥವಾ ಮಾದಕ ವಸ್ತುಗಳನ್ನು ನಿಯಂತ್ರಣ ಮಾಡಲು ಜಿಲ್ಲೆಯಲ್ಲಿ ನಾರ್ಕಟಿಕ್ ಕ್ರೈಂ ಕೋ- ಆರ್ಡಿನೇಷನ್ ಕಮಿಟಿಯಿರುವುದಾಗಿ ಅವರು ತಿಳಿಸಿದರು. `ಮಾದಕ ವ್ಯಸನ ದೂರ ಮಾಡಲು ಸಾರ್ವಜನಿಕರ ಸಹಕಾರ ಅತಿ ಮುಖ್ಯ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದರು. `ಡ್ರಗ್ಸ್ ಸೇವನೆ ಅಥವಾ ಮಾರಾಟ ಗಮನಕ್ಕೆ ಬಂದರೆ ಪೊಲೀಸರಿಗೆ ಮಾಹಿತಿ ನೀಡಿ’ ಎಂದು ಕರೆ ನೀಡಿದರು.