ಮಂಗನ ಕಾಯಿಲೆ ಕುರಿತು ಉತ್ತರ ಕನ್ನಡ ಜಿಲ್ಲಾಡಳಿತ ಸಾಕಷ್ಟು ಮುನ್ನಚ್ಚರಿಕೆವಹಿಸಿದ್ದು, ಅಸಹಜ ಮಂಗಗಳ ಸಾವಿನ ಬಗ್ಗೆ ಅಧ್ಯಯನ ನಡೆಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 18 ಮಂಗಗಳು ಅಸಹಜ ರೀತಿಯಲ್ಲಿ ಸಾವನಪ್ಪಿರುವುದು ವರದಿಯಾಗಿದೆ. ಇದರೊಂದಿಗೆ ಶಿರಸಿಯ ವ್ಯಕ್ತಿಯೊಬ್ಬನಲ್ಲಿ ಮಂಗನ ಕಾಯಿಲೆ ರೋಗ ದೃಢವಾಗಿದೆ.
ಈ ಹಿನ್ನಲೆ ಮಂಗನ ಖಾಯಿಲೆ ಹರಡದಂತೆ ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ. `ಮಂಗನ ಖಾಯಲೆ ಕಾಣಿಸಿಕೊಳ್ಳಬಹುದಾದ ತಾಲೂಕು ಮತ್ತು ಗ್ರಾಮಗಳನ್ನು ಸಾಕಷ್ಟು ಮುಂಚಿತವಾಗಿ ಗುರುತಿಸಿ ಆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜಾಗೃತಿ ಕಾರ್ಯಕ್ರಮಗಳನ್ನು ಅಯೋಜಿಸಿ’ ಎಂದವರು ಹೇಳಿದ್ದಾರೆ. ಮಂಗ ಸಾವನಪ್ಪಿದ ಪ್ರದೇಶದ ಸುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗಳಿಗೆ ಡೆಪೋ ತೈಲವನ್ನು ವಿತರಿಸಬೇಕು ಎಂದು ಅವರು ಸೂಚಿಸಿದ್ದಾರೆ.
2025ರ ಜನವರಿಯಿಂದ ಈವರೆಗೆ 1711 ಜನರಲ್ಲಿ ಮಂಗನ ಕಾಯಿಲೆ ರೋಗ ಲಕ್ಷಣಗಳು ಕಾಣಿಸಿದ್ದವು. ಅವರೆಲ್ಲರ ವೈದ್ಯಕೀಯ ಮಾದರಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸಿ, ಅವುಗಳ ತಪಾಸಣೆಯನ್ನು ನಡೆಸಿದೆ. ಈ ವೇಳೆ ಒಬ್ಬರಲ್ಲಿ ಮಾತ್ರ ರೋಗ ದೃಢವಾಗಿದೆ. ಸದ್ಯ ನಿರಂತರ ಆರೈಕೆಯಿಂದ ಅವರು ಗುಣಮುಖರಾಗುತ್ತಿದ್ದಾರೆ. ವಿವಿಧ ಕಾರಣಗಳಿಂದ ಈವರೆಗೆ 18 ಮಂಗಗಳು ಅಸಹಜ ರೀತಿಯಲ್ಲಿ ಸಾವನಪ್ಪಿರುವುದು ಅಧ್ಯಯನ ತಂಡದ ಅರಿವಿಗೆ ಬಂದಿದೆ.
`ಎಲ್ಲಾದರೂ ಮಂಗಗಳು ಸಾವನಪ್ಪಿರುವುದು ಕಾಣಿಸಿದರೆ ಅದನ್ನು ಜನ ನಿರ್ಲಕ್ಷಿಸುವ ಹಾಗಿಲ್ಲ. ಮಂಗನ ಸಾವಿನ ಬಗ್ಗೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು’ ಎಂದು ಜಿಲ್ಲಾಡಳಿತ ಸಾರ್ವಜನಿಕರಿಗೆ ಕರೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗನ ಖಾಯಿಲೆಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಗಳನ್ನು ದಾಸ್ತಾನು ಮಾಡಲು ಸೂಚಿಸಲಾಗಿದೆ. ಜೊತೆಗೆ ಚಿಕಿತ್ಸೆಗೆ ಪ್ರತ್ಯೇಕ ಹಾಸಿಗೆಯನ್ನು ಮೀಸಲಿಡಲಾಗುತ್ತಿದೆ.