ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ತುಂಡರಿಸಿದ ದುಷ್ಟರು ಅದರ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಸರಬರಾಜು ಮಾಡಲು 7500ರೂ ಮುಂಗಡ ಹಣ ಪಡೆದಿದ್ದು, ಹೊನ್ನಾವರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಭಟ್ಕಳದ ಮದುವೆ ಮನೆಗೆ ಮಾಂಸ ಪೂರೈಕೆಯ ಗುತ್ತಿಗೆ ಪಡೆದಿದ್ದ ದುಷ್ಟರು ಹಸುವಿನ ಫೋಟೋ ಕಳುಹಿಸಿದ್ದರು. ಅದಾದ ನಂತರ ಆ ಆಕಳನ್ನು ಕೊಂದು ಹೊಟ್ಟೆಯೊಳಗಿದ್ದ ಕರುವನ್ನು ಬಿಸಾಡಿದ್ದರು. ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಮಾಂಸ ಅಪಹರಿಸಿದ್ದರು. ಈ ಪ್ರಕರಣ ದೊಡ್ಡ ಸುದ್ದಿಯಾದ ಬೆನ್ನಲ್ಲೆ ಪೊಲೀಸರು ಆರು ತಂಡ ರಚಿಸಿ ಆರೋಪಿಗಳ ಹುಡುಕಾಟ ನಡೆಸಿದ್ದರು. ಮೊದಲು ಇಬ್ಬರು ಸಿಕ್ಕಿಬಿದ್ದಿದ್ದರೂ ಇನ್ನಿಬ್ಬರು ತಲೆಮರೆಸಿಕೊಂಡಿದ್ದರು. ಆ ಇಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಹೊನ್ನಾವರದ ಸಾಲ್ಕೋಡು, ಕೊಂಡದಕುಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಗೋ ಕಳ್ಳತನ ನಡೆಯುತ್ತಿತ್ತು. ಜನ ಆ ಭಾಗದ ಚಿರತೆ ಮೇಲೆ ಸಾಕಷ್ಟು ಅನುಮಾನ ಪಟ್ಟಿದ್ದರು. ಆದರೆ, ಜನವರಿ 19ರಂದು ಗರ್ಭಿಣಿ ಹಸು ತುಂಡು ತುಂಡಾಗಿ ಬಿದ್ದಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಾದ ನಂತರ 400ಕ್ಕೂ ಅಧಿಕ ಶಂಕಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್ನಷ್ಟು ಗೋ ಮಾಂಸ ಭಕ್ಷಣೆಯ ಪ್ರಕರಣಗಳು ಹೊರ ಬಂದಿದ್ದು, ಅಕ್ರಮ ಜಾನುವಾರು ಸಾಗಾಟಗಳನ್ನು ಪೊಲೀಸರು ತಡೆದಿದ್ದರು.
ಮೂಲ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹೊನ್ನಾವರದ ಸಾಲ್ಕೊಡದಲ್ಲಿ ಮೇವಿಗೆ ತೆರಳಿದ್ದ ಗರ್ಭಿಣಿ ಗೋವು ಕೊಂದ ತೌಫಿಕ್ ಹಾಗೂ ಫೈಜಾನ್ ಸಿಕ್ಕಿ ಬಿದ್ದರು. ಅವರೊಡನೆ ವಾಸೀಂ ಹಾಗೂ ಮುಜಾಮಿಲ್ ಸಹ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಅರಿವಿಗೆ ಬಂದಿತು. ಆದರೆ, ಎಷ್ಟು ಹುಡುಕಾಟ ನಡೆಸಿದರೂ ವಾಸೀಂ ಹಾಗೂ ಮುಜಾಮಿಲ್ ಸಿಕ್ಕಿರಲಿಲ್ಲ. ಹೀಗಾಗಿ ಅವರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ 50 ಸಾವಿರ ರೂ ಬಹುಮಾನ ನೀಡುವುದಾಗಿಯೂ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಘೋಷಿಸಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳಾದ ಎಂ ಜಗದೀಶ, ಮಹೇಶ ಕೆ ನೇತ್ರತ್ವದಲ್ಲಿ ದುಷ್ಟರ ಹುಡುಕಾಟಕ್ಕೆ ತಂಡ ರಚನೆಯಾಯಿತು. ಸಿಪಿಐ ಸಂತೋಷ ಕಾಯ್ಕಿಣಿ, ಸಿದ್ದರಾಮೇಶ್ವರ ಎಸ್, ಪಿಎಸ್‌ಐ ರಾಜಶೇಖರ, ಮಮತಾ ನಾಯ್ಕ ಜೊತೆ ಹೊನ್ನಾವರದ ಪಿಎಸ್‌ಐ ಮಂಜುನಾಥ ತಂಡದವರು ಕಳ್ಳರ ಹುಡುಕಾಟ ನಡೆಸಿದರು. ಭಟ್ಕಳ, ಮುರುಡೇಶ್ವರ, ಹೊನ್ನಾವರ ಪೊಲೀಸ್ ಠಾಣೆಯ ಸಿಬ್ಬಂದಿ ಪೈಕಿ ಅಬ್ದುಲ್ ಹಮೀದ್, ಕೃಷ್ಣೆಗೌಡ, ನಾಗರಾಜ ಮೋಗೇರ, ದಿನೇಶ ನಾಯ್ಕ, ಲೋಕೇಶ ಕತ್ತಿ, ಮಂಜುನಾಥ ಲಕ್ಮಾಪುರಿ, ಮೈನುದ್ದೀನ್ ಘಾಟ್ನೀ, ಆನಂದ ಲಮಾಣಿ, ವಿಠ್ಠಲ್ ಹಳಿ, ಮಲ್ಲಿಕಾರ್ಜುನ ಸರದಾರ ಸೇರಿ ಈ ಪ್ರಕರಣಕ್ಕಾಗಿ ಓಡಾಟ ನಡೆಸಿದರು. ಸಿಡಿಆರ್ ವಿಭಾಗದ ಉದಯ ಗುಣಗಾ ಹಾಗೂ ಬಬನ ಗೋ ಕಳ್ಳರ ತಾಂತ್ರಿಕ ಚಲನ-ವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಅದರ ಪ್ರಕಾರ ಜನವರಿ 23ರಂದು ಧಾರವಾಡ ಕಡೆಯಿಂದ ಆರೋಪಿತರು ತಪ್ಪಿಸಿಕೊಂಡು ಹೋಗಿರುವ ಅನುಮಾನ ಕಾಡಿತು. ಈ ಹಿನ್ನಲೆ 130 ಪ್ರದೇಶದಲ್ಲಿಸಿ ಸಿಸಿ ಕ್ಯಾಮರಾಗಳನ್ನು ಪೊಲೀಸರು ತಪಾಸಣೆ ಮಾಡಿದರು. ಹಾವೇರಿ, ದಾವಣಗೆರೆ, ವಿಜಯಪುರ, ಗೋವಾ-ಮಹಾರಾಷ್ಟçದಲ್ಲಿ ಸಹ ಆ ಇಬ್ಬರಿಗಾಗಿ ಹುಡುಕಾಟ ನಡೆಸಿದರು. ಈ ನಡುವೆ ಮಾರ್ಚ 8ರಂದು ಪಿಎಸ್‌ಐ ಮಂಜುನಾಥ ಅವರಿಗೆ ಆರೋಪಿ ಮಜಮಿಲ್ ಭಟ್ಕಳದ ಮನೆಗೆ ಬಂದ ಮಾಹಿತಿ ಸಿಕ್ಕಿತು. ಪೊಲೀಸ್ ಸಿಬ್ಬಂದಿ ಕೃಷ್ಣೆಗೌಡ, ನಾಗರಾಜ ಮೊಗೇರ್, ಲೋಕೇಶ ಕತ್ತಿ, ದಿನೇಶ ನಾಯಕ ಅವರನ್ನು ಅಲ್ಲಿಗೆ ಕಳುಹಿಸಿ, ಮಜಮಿಲ್’ನನ್ನು ವಶಕ್ಕೆ ಪಡೆದರು.
ನಂತರ ಉಳಿದ ಸಿಬ್ಬಂದಿ ಅಬ್ದುಲ್ ಹಮೀದ್, ವಿಠ್ಠಲ ಹಳ್ಳಿ, ಮಲ್ಲಿಖಾರ್ಜುನ ಸೇರಿ ಮುಂಬೈ ಪ್ರಯಾಣ ಬೆಳಸಿದರು. ಅಲ್ಲಿನ ಪಕೀರ ಬಜಾರಿನಲ್ಲಿ ಗುಲ್ವಾಡಿ ಸರ್ಕಲ್ ಬಳಿ ಅಡಗಿದ್ದ ವಾಸಿಂ’ನನ್ನು ಅವರೆಲ್ಲರೂ ಸೇರಿ ಬಂಧಿಸಿದರು. ಇನ್ನೂ ಈ ಪ್ರಕರಣ ಬೇದಿಸಲು ಸಾರ್ವಜನಿಕರು ಪೊಲೀಸರಿಗೆ ನೆರವಾಗಿದ್ದರು. ದುಷ್ಟರ ಸುಳಿವು ನೀಡಿದ ಇಬ್ಬರಿಗೆ ಪೊಲೀಸರು 50 ಸಾವಿರ ರೂ ಬಹುಮಾನವನ್ನು ನೀಡಿದರು.