ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತದ 2ನೇ ಅವಧಿಯ ಚುನಾವಣೆಯಲ್ಲಿನ ಅಕ್ರಮ ಹಾಗೂ ಗೊಂದಲದ ತನಿಖೆಗೆ ಆಗ್ರಹಿಸಿ ಒಕ್ಕೂಟದ ನಿರ್ದೇಶಕಿ ಸರಸ್ವತಿ ಎನ್ ರವಿ ಅವರು ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ದೂರು ನೀಡಿದ್ದಾರೆ.
ಚುನಾವಣಾ ಅಕ್ರಮ ನಡೆಸಿದ ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜೀತ್ ಶಿರಹಟ್ಟಿ ಅವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ. `ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಿ ಹಂತ ಹಂತದ ಎಲ್ಲಾ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕಾದ ರಿಟರ್ನಿಂಗ್ ಅಧಿಕಾರಿ ಕಾನೂನುಬಾಹಿರ ಕೆಲಸ ಮಾಡಿದ್ದಾರೆ. ಈ ಅಕ್ರಮ ಖಂಡಿಸಿ ಮುಷ್ಕರ ಶುರು ಮಾಡಿದಾಗ ತನಿಖೆ ನಡೆಸುವ ಭರವಸೆ ನೀಡಲಾಗಿದ್ದು, ಅದು ಈಡೇರಿಲ್ಲ’ ಎಂದು ಹೋರಾಟಗಾರ್ತಿ ಸರಸ್ವತಿ ಎನ್ ರವಿ ಅವರು ವಿವರಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ನಿಯಮಿತದಲ್ಲಿನ ಅಕ್ರಮದ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ. ಇಲ್ಲಿ ನ್ಯಾಯ ಸಿಗದಿದ್ದರೆ, ನಿಯಮಬಾಹಿರವಾಗಿ ಚುನಾವಣೆ ನಡೆದ ಕುರಿತು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದೇನೆ’ ಎಂದು ದ ಸರಸ್ವತಿ ಎನ್ ರವಿ ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಭರವಸೆ ನೀಡಿದ್ದಾರೆ.