`ಯಲ್ಲಾಪುರ ಪಟ್ಟಣ ಪಂಚಾಯತ ಆಡಳಿತ ಸಂಪೂರ್ಣವಾಗಿ ಹದಗೆಟ್ಟಿದ್ದು, ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬೇಕು’ ಎಂದು ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಹೇಳಿದ್ದಾರೆ.
`ಕಳೆದ ನಾಲ್ಕು ತಿಂಗಳಿನಿoದ ಪಟ್ಟಣ ಪಂಚಾಯತದ ಸಾಮಾನ್ಯ ಸಭೆ ಸರಿಯಾಗಿ ಆಗುತ್ತಿಲ್ಲ. ಅಜೆಂಡಾ ಓದುವ ಮುನ್ನವೆ ಗಲಾಟೆ ನಡೆಯುತ್ತಿದ್ದು, ಜನ ಸಾಮಾನ್ಯರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಪಟ್ಟಣ ಪಂಚಾಯತದಲ್ಲಿ ಅಧಿಕಾರಿಗಳ ಆಡಳಿತ ನಡೆಯುತ್ತಿದೆ. ಜನಪ್ರತಿನಿಧಿಗಳಿಗೆ ಬೆಲೆಯಿಲ್ಲದಿರುವ ಬಗ್ಗೆ ಸದಸ್ಯರು ಹೇಳುತ್ತಿದ್ದಾರೆ. ಆಡಳಿತ ಪಕ್ಷದವರ ವಾರ್ಡುಗಳಲ್ಲಿನ ಸಮಸ್ಯೆ ಬಗೆಹರಿಯದ ಬಗ್ಗೆ ಅವರು ಪ್ರತಿಭಟಿಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ-ಉಪಾಧ್ಯಕ್ಷರು ಆಡಳಿತ ಸರಿ ನಡೆಸುವಲ್ಲಿ ವಿಫಲರಾಗಿದ್ದಾರೆ’ ಎಂದು ಸೋಮೇಶ್ವರ ನಾಯ್ಕ ಹೇಳಿದ್ದಾರೆ.
`ಅಂಬೇಡ್ಕರ ನಗರ ಅಂಗನವಾಡಿ ಸಮಸ್ಯೆ ಈವರೆಗೂ ಬಗೆಹರಿದಿಲ್ಲ. ಬಡವರಿಗೆ ನಿರ್ಮಿಸಲಾದ ಮನೆಗಳ ಹಸ್ತಾಂತರ ನಡೆದಿಲ್ಲ. ಮೀನು ಮಾರುಕಟ್ಟೆ ಸಮಸ್ಯೆ ಹಾಗೂ ಕಟ್ಟಡದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಸಾಮಾನ್ಯ ಸಭೆಯಲ್ಲಿ ಒಂದೂ ಗಂಭೀರ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಜಾತ್ರೆ ಮುಗಿದು 2 ವರ್ಷ ಕಳೆದರೂ ಅದರ ಲೆಕ್ಕಾಚಾರ ಒಪ್ಪಿಸಿಲ್ಲ. ಪದೇ ಪದೇ ಸಿಸಿ ಕ್ಯಾಮರಾ ಅಳವಡಿಕೆ ಟೆಂಡರ್ ಕರೆಯಲಾಗುತ್ತಿದ್ದು, ಅಲ್ಲಿನ ಕ್ರಿಯಾ ಯೋಜನೆಗಳು ಸರಿಯಾಗಿಲ್ಲ’ ಎಂದು ಸೋಮೇಶ್ವರ ನಾಯ್ಕ ದೂರಿದ್ದಾರೆ.
`ಬಡ ರೈತರು ಹಾಗೂ ತರಕಾರಿ ಮಾರುವವರಿಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ. ಮಾರುಕಟ್ಟೆ ಶುಲ್ಕ ವಸೂಲಿ ವಿಷಯದಲ್ಲಿ ಷರತ್ತು ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ನೀರು ಸೇರಿ ವಿವಿಧ ತೆರಿಗೆ ಪಾವತಿಗೆ ಜನ ಪಟ್ಟಣ ಪಂಚಾಯತ ಕಚೇರಿಗೆ ಬರುತ್ತಿದ್ದು, ಇಲ್ಲಿ ತೆರಿಗೆ ಸ್ವೀಕರಿಸಲು ಸಿಬ್ಬಂದಿ ಇರುವುದಿಲ್ಲ. ಈ ಬಗ್ಗೆ ಗಮನಿಸಬೇಕಾದ ಮುಖ್ಯಾಧಿಕಾರಿ ಹಾಗೂ ಆಡಳಿತದಲ್ಲಿರುವವರು ಮೈ ಮರೆತಿದ್ದಾರೆ’ ಎಂದು ಸೋಮೇಶ್ವರ ನಾಯ್ಕ ಅಸಮಧಾನವ್ಯಕ್ತಪಡಿಸಿದ್ದಾರೆ.
`ಇದೇ ರೀತಿ ಮುಂದುವರೆದರೆ ಭವಿಷ್ಯದ ಎಲ್ಲಾ ಸಭೆಗಳನ್ನು ಬಿಜೆಪಿ ಬಹಿಷ್ಕರಿಸಲಿದೆ. ಆಡಳಿತದ ವಿರುದ್ಧ ಧಿಕ್ಕಾರ ಕೂಗಲಿದೆ’ ಎಂದು ಅವರು ಎಚ್ಚರಿಸಿದ್ದಾರೆ. `ಸರಿಯಾದ ಆಡಳಿತ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ’ ಎಂದವರು ಆಗ್ರಹಿಸಿದ್ದಾರೆ.