ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನದ ಅಂಗವಾಗಿ ದೇಶದ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸೈಕ್ಲೋಥಾನ್-2025 ಸೋಮವಾರ ಸಂಜೆಯೇ ಕಾರವಾರ ಪ್ರವೇಶಿಸಿದೆ. ಮಂಗಳವಾರ ಕಮಾಂಡೋ ಸಮವಸ್ತçದಲ್ಲಿದ್ದ ಯೋಧರು ತಮ್ಮ ಕಾರ್ಯಾಚರಣೆ ಕಾರ್ಯ ವಿಧಾನಗಳ ಬಗ್ಗೆ ವಿವರಿಸಿದರು.
ಸಿಐಎಸ್‌ಎಫ್‌ನ ಮೈ ನವಿರೇಳಿಸುವ ಶೌರ್ಯದ ಪ್ರದರ್ಶನವು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗಮನಸೆಳೆಯಿತು. ತಾವು ಬಳಕೆ ಮಾಡುವ ಶಸ್ತ್ರಗಳನ್ನು ಯೋಧರು ಪರಿಚಯಿಸಿದರು. ವಿವಿಧ ರೀತಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಾಚರಣೆಯ ಕೌಶಲ್ಯವನ್ನು ತೋರ್ಪಡಿಸಿದರು. ಬಳಿಕ ನಡೆದ ಕಾರ್ಯಾಚರಣೆಗಳಲ್ಲಿ ಬೆಂಕಿಯ ರಿಂಗ್‌ನಲ್ಲಿ ಹಾರಿದರು.
ರಕ್ಷಣೆ ಕಾರ್ಯಾಚರಣೆಗಳಲ್ಲಿ ಬಳಕೆಯಾಗುವ ಶ್ವಾನ ದಳದ ಪ್ರಾಮುಖ್ಯತೆ ತಿಳಿಸುವ, ಮಾದಕ ವಸ್ತುಗಳನ್ನು ಪತ್ತೆ ಮಾಡುವ ಶ್ವಾನಗಳ ಕಾರ್ಯಕ್ಷಮತೆಯನ್ನು ಮತ್ತು ಅವುಗಳ ಕ್ಷಮತೆಯ ಕೌಶಲ್ಯವನ್ನು ಪ್ರದರ್ಶಿಸಲಾಯಿತು. ಅಗ್ನಿಶಾಮಕ ವಾಹನದಿಂದ ಬೆಂಕಿ ಅನಾಹುತಗಳನ್ನು ನಿಗ್ರಹಿಸುವ ಅಣುಕು ಪ್ರದರ್ಶನ ಕೂಡ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ತಂಡದಿoದ ಹಾಲಕ್ಕಿ ಸಮುದಾಯದ ಜಾನಪದ ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.