`ಸಾಗರ ಮಾಲಾ ಯೋಜನೆ ಅಡಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮೀನುಗಾರ ಸಂಘಟನೆಯ ವಿರೋಧವಿದೆ. ಅದಾಗಿಯೂ ಬಂದರು ನಿರ್ಮಾಣ ಕೈಗೊಂಡರೆ ಉಗ್ರ ಹೋರಾಟ ನಿಶ್ಚಿತ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಬಂದರು ನಿರ್ಮಾಣಕ್ಕೆ ಪ್ರತಿಭಟನೆ ನಡೆಸಿದ ಮೀನುಗಾರರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಅನಗತ್ಯವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಕೇಣಿಯಲ್ಲಿ ಸರ್ವೆಗೆ ವಿರೋಧವಿದ್ದರೂ ಸರ್ವೇ ನಡೆದಿದೆ. ಮೀನುಗಾರ ಸಮುದಾಯದವರೆ ಬಂದರು ಸಚಿವರಿದ್ದರೂ ಮೀನುಗಾರರ ಮೇಲಿನ ದೌರ್ಜನ್ಯ ತಡೆಯುತ್ತಿಲ್ಲ’ ಎಂದು ದೂರಿದರು.
`ಮೀನುಗಾರ ಮುಖಂಡರ ವಿರುದ್ಧ ಸಚಿವರು ಹಾಗೂ ಶಾಸಕರು ಬಹಿರಂಗವಾಗಿ ಲಂಚದ ಆರೋಪ ಮಾಡಿದ್ದಾರೆ. ಸುಳ್ಳು ಆರೋಪ, ಪೊಲೀಸ್ ಪ್ರಕರಣಗಳಿಗೆ ಬಗ್ಗುವುದಿಲ್ಲ’ ಎಂದು ಎಚ್ಚರಿಸಿದರು. `ಮೀನುಗಾರರ ನಡುವೆ ಒಡಕು ಮೂಡಿಸಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ದೂರಿದರು. `ಕಾರವಾರ ಅಂಕೋಲಾ ತಾಲೂಕಿನ ಹಲವು ಗ್ರಾಮಗಳಲ್ಲಿ ಬದುಕು ಸಾಗಿಸುತ್ತಿದ್ದ ಮೀನುಗಾರರನ್ನು ದೇಶದ ರಕ್ಷಣೆಯ ಹೆಸರಿನಲ್ಲಿ ಒಕ್ಕಲೆಬ್ಬಿಸಿದ್ದಾರೆ. ಮೀನುಗಾರರ ಮನೆ, ಜಮೀನು ಕಿತ್ತುಕೊಳ್ಳಲಾಗಿದೆ. ಅವರಿಗೆ ಸರಿಯಾದ ಪುನರ್ವಸತಿ ಅಥವಾ ಉದ್ಯೋಗವಿಲ್ಲದೆ ನಿರಾಶ್ರಿತರಾಗಿ ಬದುಕು ನರಕವಾಗಿದೆ. ಈಗ ಜಿಲ್ಲೆಯ ವಿವಿಧೆಡೆ ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಮೀನುಗಾರರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.
ರಾಜೇಶ ಮಾಜಾಳಿಕರ, ಗೌರಿಶ ಉಳ್ವೇಕರ, ವಾಮನ ಹರಿಕಂತ್ರ ಇದ್ದರು.