ಶಿರಸಿ ಬನವಾಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರಘುಪತಿ ಹೆಗಡೆ ಅವರಿಗೆ ಅಪರಿಚಿತ ವಾಹನ ಗುದ್ದಿದೆ. ಗಾಯಗೊಂಡ ಅವರನ್ನು ಹುಬ್ಬಳ್ಳಿ ಕಿಮ್ಸ್’ಗೆ ಕರೆದೊಯ್ದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸಿದ್ದಾಪುರ ತಾಲೂಕಿನ ಬಾಳೆಸರದ ರಘುಪತಿ ವೆಂಕಟ್ರಮಣ ಹೆಗಡೆ (64) ಕೃಷಿ ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 1ರ ಸಂಜೆ 7.30ರ ಆಸುಪಾಸಿಗೆ ಅವರು ಶಿರಸಿ-ಬನವಾಸಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಹಂಚಿನಕೇರಿ ಹತ್ತಿರ ಅವರಿಗೆ ವಾಹನ ಗುದ್ದಿತು.
ರಕ್ತದ ಮೊಡವಿನಲ್ಲಿ ಬಿದ್ದಿದ್ದ ರಘುಪತಿ ಹೆಗಡೆ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಏಪ್ರಿಲ್ 2ರ ನಸುಕಿನಲ್ಲಿ ಅವರು ಸಾವನಪ್ಪಿದರು. ಅವರಿಗೆ ಅಪಘಾತ ಮಾಡಿದ ವಾಹನ ಯಾವುದು? ಎಂದು ಗೊತ್ತಾಗಲಿಲ್ಲ.
ಅಪಘಾತಪಡಿಸಿದ ವಾಹನ ಚಾಲಕ ಗಾಯಾಳುವಿನ ನೆರವಿಗೂ ಬರಲಿಲ್ಲ. ಪೊಲೀಸ್ ಠಾಣೆಗೂ ಮಾಹಿತಿ ನೀಡಲಿಲ್ಲ. ಅಪಘಾತದ ನಂತರ ತುರ್ತು ಚಿಕಿತ್ಸೆ ಸಿಗದ ಕಾರಣದಿಂದ ರಘುಪತಿ ಹೆಗಡೆ ಸಾವನಪ್ಪಿದ್ದು, ಅವರ ಸಹೋದರ ತಿಮ್ಮಪ್ಪ ಹೆಗಡೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪಘಾತ ನಡೆಸಿದ ಅಪರಿಚಿತ ವಾಹನ ಪತ್ತೆ ಮಾಡಿಕೊಡುವಂತೆ ಅವರು ಕೋರಿದ್ದಾರೆ.