ಭಟ್ಕಳದ ಮಾರುತಿ ನಾಯ್ಕ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸುವ ಸಾಹಸ ಮಾಡಿರುವುದೇ ಅವರ ಸಾವಿಗೆ ಕಾರಣ!
ಮುರುಡೇಶ್ವರದ ಬಸ್ತಿ ಕಾಯ್ಕಿಣಿ ಬಿದ್ರೆಮನೆ ರಸ್ತೆ ಬಳಿ ಮಾರುತಿ ನಾಯ್ಕ ಅವರು ವಾಸವಾಗಿದ್ದರು. ಚಾಲಕರಾಗಿ ಅವರು ಬದುಕು ಕಟ್ಟಿಕೊಂಡಿದ್ದರು. ಏಪ್ರಿಲ್ 1ರಂದು
ಮಾರುತಿ ನಾಯ್ಕ ಅವರು ಅಳ್ವೆಕುಡಿಯಿಂದ ಶಿರಾಲಿ ಕಡೆ ಬೈಕಿನಲ್ಲಿ ಹೋಗುತ್ತಿದ್ದರು. ಆ ಬೈಕಿನಲ್ಲಿ ಮಾವಳ್ಳಿ-2 ಗುಮ್ಮನಕಲ್ ಕಾಯ್ಕಿಣಿ ತಿಮ್ಮಯ್ಯ ನಾಯ್ಕ ಅವರು ಸಹ ಸವಾರರಾಗಿದ್ದರು.
ಬೆಳಗ್ಗೆ 10.30ರ ವೇಳೆಗೆ ಬೈಕು ಜಿ ಎಂ ಎಂ ದೇವಸ್ಥಾನ ದಾಟಿ ಮುಂದೆ ಸಾಗಿತು. ಬ್ಯಾಂಕ್ ಆಫ್ ಬರೋಡಾ ಮುಂದೆ ದೊಡ್ಡದಾದ ಹೊಂಡ ಕಾಣಿಸಿತು. ಬೈಕ್ ಓಡಿಸುತ್ತಿದ್ದ ಮಾರುತಿ ನಾಯ್ಕ ಅವರು ಆ ಹೊಂಡ ತಪ್ಪಿಸುವ ಸಾಹಸ ಮಾಡಿದರು. ಆದರೆ, ಬೈಕು ಅವರ ನಿಯಂತ್ರಣ ತಪ್ಪಿತು. ರಸ್ತೆ ಅಂಚಿನಲ್ಲಿದ್ದ ಶ್ರೀ ಅಮ್ಮ ಹೂವಿನ ಅಂಗಡಿಯ ಸ್ಟಾಂಡಿಗೆ ಬೈಕು ಗುದ್ದಿತು.
ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಮಾರುತಿ ನಾಯ್ಕ ಅವರು ಅಲ್ಲಿಯೇ ಎಚ್ಚರ ತಪ್ಪಿ ಬಿದ್ದರು. ಭಟ್ಕಳ ಆಸ್ಪತ್ರೆಗೆ ತರುವಾಗ ಅವರು ಸಾವನಪ್ಪಿದರು. ಈ ಬಗ್ಗೆ ಬೈಕಿನಲ್ಲಿ ಹಿಂದೆ ಕೂತಿದ್ದ ತಿಮ್ಮಯ್ಯ ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.





