ಅರಣ್ಯಾಧಿಕಾರಿ ಅಶೋಕ್ ಭಟ್ಟ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿ ವೇಳೆ ಲೋಕಾಯುಕ್ತರ ಹೆಸರಿನಲ್ಲಿ ಅಶೋಕ ಭಟ್ಟ ಅವರಿಗೆ ಫೋನ್ ಮಾಡಿ 50 ಸಾವಿರ ರೂ ವಸೂಲಿ ಮಾಡಿದ್ದ ಮುರುಗೇಶ್ ಕುಂಬಾರ್’ಗೆ ಸಹಾಯ ಮಾಡಿದ ರಾಜು ಅರೆಮನೆ ಎಂಬಾತನಿಗೆ ನ್ಯಾಯಾಲಯ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.
2014ರಲ್ಲಿ ಅಶೋಕ್ ಭಟ್ಟ ಮುಂಡಗೋಡಿನಲ್ಲಿ ಎಸಿಎಫ್ ಆಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಅವರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಈ ಸಮಯದಲ್ಲಿ ಮುರುಗೇಶ್ ಕುಂಬಾರ್ ಎಂಬ ಕಳ್ಳ ಧಾರವಾಡದ ಜೈಲಿನಲ್ಲಿದ್ದ. ಅಶೋಕ ಭಟ್ಟರ ಮೇಲೆ ಲೋಕಾಯುಕ್ತ ದಾಳಿ ನಡೆದಿದನ್ನು ಅರಿತ ಆತ ತನ್ನ ಸಹಚರ ರಾಜು ಅರಮನೆ ನೆರವು ಪಡೆದು ಜೈಲಿನಿಂದಲೇ ಅಶೋಕ ಭಟ್ಟರಿಗೆ ಫೋನ್ ಮಾಡಿ, `ತಾನು ಲೋಕಾಯುಕ್ತ. ತಮ್ಮನ್ನು ಪ್ರಕರಣದಿಂದ ಹೊರತರಲು 5 ಲಕ್ಷ ರೂ ಹಣ ಕೊಡಬೇಕು’ ಎಂದಿದ್ದ. ಆತನನ್ನು ನಂಬಿದ ಅಶೋಕ ಭಟ್ಟರು ಕಾಡಿಬೇಡಿ 50 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದರು. ಆದರೆ, ಅವರ ಮೇಲಿದ್ದ ಪ್ರಕರಣ ಮಾತ್ರ ಹಾಗೇ ಮುಂದುವರೆದಿತ್ತು.
`ಹಣ ಕೊಟ್ಟ ನಂತರವೂ ಲೋಕಾಯುಕ್ತರು ಸಹನೆ ತೋರಲಿಲ್ಲ’ ಎನ್ನುತ್ತ ಅಶೋಕ ಭಟ್ಟರು ನೇರವಾಗಿ ಲೋಕಾಯುಕ್ತರನ್ನು ಭೇಟಿ ಮಾಡಿದರು. ಆಗ, ನಿಜವಾದ ಲೋಕಾಯುಕ್ತ ಅಧಿಕಾರಿ `ತಾನೂ ಯಾರಿಂದಲೂ ಹಣ ಸ್ವೀಕರಿಸುದಿಲ್ಲ. ಹಣ ಕೊಡಲು ಬಂದ ನಿಮ್ಮ ಮೇಲೆಯೇ ಇನ್ನೊಂದು ಪ್ರಕರಣ ದಾಖಲಿಸುವೆ’ ಎಂದು ಗದರಿಸಿದ್ದರು. ಇದರಿಂದ ಮೋಸ ಹೋದದನ್ನು ಅರಿತ ಅಶೋಕ ಭಟ್ಟರು ಲೋಕಾಯುಕ್ತ ಹೆಸರಿನಲ್ಲಿ ಕರೆ ಮಾಡಿ, ಹಣ ಪೀಕಿಸಿದ್ದ ಮುರುಗೇಶ್ ಕುಂಬಾರ್ ಹಾಗೂ ಆತನಿಗೆ ಸಹಾಯ ಮಾಡಿದ್ದ ರಾಜು ಅರಮನೆ ವಿರುದ್ಧ ದೂರು ನೀಡಿದ್ದರು. ಜೈಲಿನಲ್ಲಿದ್ದುಕೊಂಡೇ ಹಣ ಪೀಕಿಸಿದ್ದ ಆತನ ವಿರುದ್ಧ ತನಿಖೆ ನಡೆದಿದ್ದರೂ ಪ್ರಮುಖ ಆರೋಪಿಯಾಗಿದ್ದ ಮುರುಗೇಶ್ ಕುಂಬಾರ್ ಇದರಿಂದ ತಪ್ಪಿಸಿಕೊಂಡಿದ್ದ. ಆತನಿಗೆ ಸಹಾಯ ಮಾಡಿದ ರಾಜು ಅರಮನೆ ಆರೋಪ ಸಾಭೀತಾಗಿದ್ದು, ಆತನಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಅಂದು ಲೋಕಾಯುಕ್ತ ದಾಳಿ ಹಾಗೂ ಈ ಪ್ರಕರಣ ಆಗದೇ ಇದ್ದಿದ್ದರೆ ಅಶೋಕ್ ಭಟ್ಟ ಬಹುಬೇಗ ಪದೋನ್ನತಿ ಪಡೆದು ಡಿ ಎಫ್ ಓ ಆಗುತ್ತಿದ್ದರು.




Discussion about this post