`ಭಕ್ತರಿಗೂ – ಭಗವಂತನಿಗೂ ಅವಿನಾಭಾವ ಸಂಬoಧವಿದೆ. ಭಕ್ತರಿಲ್ಲದಿದ್ದರೆ ಆ ಭಗವಂತನೆ ಇಲ್ಲ’ ಎಂದು ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿ ಮಾರುತಿ ಗುರೂಜಿ ಹೇಳಿದ್ದಾರೆ.
ಶುಕ್ರವಾರ ಹೊನ್ನಾವರದ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವದ ಧರ್ಮಸಭೆಯಲ್ಲಿ ಮಾತನಾಡಿದ ಅವರು `ಭಗವಂತನ ಅಸ್ತಿತ್ವ ಇರುವುದೇ ಭಕ್ತರಲ್ಲಿ’ ಎಂದು ಪ್ರತಿಪಾದಿಸಿದ್ದಾರೆ. `ದೇವಸ್ಥಾನಗಳು ಒಂದು ಧರ್ಮ, ಒಂದು ಕೋಮು ಅಥವಾ ಮತಕ್ಕೆ ಸೀಮಿತ ಅಲ್ಲ. ಅವು ದೇವರ ಆವಾಸ ಸ್ಥಾನವಾಗಿವೆ. ದೇವರು ಎಲ್ಲಡೆ, ಎಲ್ಲರಲ್ಲೂ ಇದ್ದಾನೆ’ ಎಂದು ಅವರು ಹೇಳಿದ್ದಾರೆ.
`ಸಮಾಜವನ್ನು ಉದ್ಧರಿಸುವ ಜವಾಬ್ದಾರಿಯುತ ಸ್ಥಾನ ದೇವಸ್ಥಾನದ ಮೇಲಿದೆ. ಸಮಾಜ ಹಾಗೂ ಸಮಾಜದಲ್ಲಿರುವ ವ್ಯಕ್ತಿಗಳು ದಾರಿ ತಪ್ಪಿದಾಗ ತಿದ್ದಿ ಹೇಳುವ ವ್ಯವಸ್ಥೆ ದೇವಸ್ಥಾನಗಳಲ್ಲಿರಬೇಕು. ದೇವಸ್ಥಾನಗಳು ಕೇವಲ ಪೂಜೆ ಪುನಸ್ಕಾರಕ್ಕೆ ಅಷ್ಟೆ ಸೀಮಿತವಲ್ಲ. ಎಲ್ಲ ಆಗುಹೋಗುಗಳಿಗೆ ಸ್ಪಂದಿಸಿ ಸನ್ಮಾರ್ಗದಲ್ಲಿ ಸಮಾಜವನ್ನು ಕೊಂಡೊಯ್ಯುವ ಕೆಲಸ ದೇವಸ್ಥಾನಗಳಿಂದ ಆಗಬೇಕು’ ಎಂದವರು ಕರೆ ನೀಡಿದರು.
`ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗಲು ಉತ್ಸವ ಬೇಕು. ದೇವಸ್ಥಾನಗಳು ಸಮಾಜದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಟೀಕೆ ಟಿಪ್ಪಣೆಗಳು ಸಹಜವಾಗಿ ಬರುತ್ತದೆ. ಅಂತಹ ಟೀಕೆಗಳ ಬಗ್ಗೆಯೂ ದೇವಸ್ಥಾನಗಳು ಯೋಚಿಸಬೇಕು. ಭಕ್ತರು, ಭಕ್ತರ ಸೇವೆ ಇಲ್ಲದೇ ದೇವಸ್ಥಾನಗಳು ನಡೆಯಲು ಸಾಧ್ಯವಿಲ್ಲ’ ಎಂದವರು ಅಭಿಪ್ರಾಯಪಟ್ಟರು.







