ಹಾಲು ಸಾಗಾಟದ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿದ್ದದನ್ನು ಕುಮಟಾ ಪೊಲೀಸರು ಪತ್ತೆ ಮಾಡಿದ್ದಾರೆ. ಹಾಲು ಸಾಗಾಟ ವಾಹನ ತಡೆದಾಗ ಕಂಟೇನರ್ ಒಳಗೆ ಉಸಿರುಗಟ್ಟಿ 5 ಜಾನುವಾರು ಸಾವನಪ್ಪಿರುವುದು ಗೊತ್ತಾಗಿದೆ.
ಗುರುವಾರ ಮಧ್ಯಾಹ್ನ ಹೊಳೆಗದ್ದೆ ಟೋಲ್ ಗೇಟ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಕಂಟೇನರ್’ಗೆ ಪಿಎಸ್‌ಐ ಮಯೂರ ಪಟ್ಟಣಶೆಟ್ಟಿ ಕೈ ಮಾಡಿದರು. ಪೊಲೀಸರನ್ನು ಕಂಡ ತಕ್ಷಣ ಆ ಕಂಟೇನರಿನಲ್ಲಿದ್ದ ನಾಲ್ವರು ಓಡಿ ಪರಾರಿಯಾದರು. ತಕ್ಷಣ ಪೊಲೀಸರು ಚಾಲಕ ಅನ್ಸಾರಿ ಮಹಮ್ಮದ ಸಲ್ಮಾನ್’ರನ್ನು ವಶಕ್ಕೆಪಡೆದರು.
ಕಂಟೇನರ್ ಬಾಗಿಲು ತೆರೆದು ನೋಡಿದಾಗ ಅಲ್ಲಿ 14 ಜಾನುವಾರುಗಳಿದ್ದವು. ಆ ಪೈಕಿ ಐದು ಜಾನುವಾರುಗಳು ಉಸಿರುಗಟ್ಟಿ ಸಾವನಪ್ಪಿದ್ದವು. ಸಿಕ್ಕಿಬಿದ್ದ ಮಹಾರಾಷ್ಟçದ ಅನ್ಸಾರಿ ಮಹಮ್ಮದ ಸಲ್ಮಾನ್ ವಿಚಾರಿಸಿದಾಗ ಓಡಿ ಹೋದವರ ಹೆಸರು ಬಾಯ್ಬಿಟ್ಟರು. ಮಹಾರಾಷ್ಟದ ಸಮೀರ್ ಸೇಟ್, ಜಾವೇದ ಮುಲ್ಲಾ ಹಾಗೂ ಭಟ್ಕಳದ ಹನಿಪಾದ್ ನಿವಾಸಿ ಅಶೀಪ್ ಕೋಲಾ, ಅಜಾದನಗರದ ಅಪ್ಬಲ್ ಖಾಸಿಂಜಿ ಓಡಿಹೋದವರು ಎಂಬುದು ತಿಳಿಯಿತು.
ವಾಹನ ಹಾಗೂ ಜಾನುವಾರುಗಳನ್ನು ವಶಕ್ಕೆಪಡೆದ ಪೊಲೀಸರು ಓಡಿ ಹೋದವರ ಜೊತೆ ಸಿಕ್ಕಿಬಿದ್ದವನ ವಿರುದ್ಧವೂ ಪ್ರಕರಣ ದಾಖಲಿಸಿದರು. ಪಿಎಸ್‌ಐ ಮಂಜುನಾಥ ಗೌಡರ್ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.