ಮುರುಡೇಶ್ವರ ಬಳಿ ನಡೆದು ಹೋಗುತ್ತಿದ್ದ ಮೀನುಗಾರ ಮಹಿಳೆಯ ಕತ್ತಿನಲ್ಲಿದ್ದ ಸರ ಎಗರಿಸಿದ ಇಬ್ಬರು ಆಗಂತುಕರನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪತ್ತೆ ಹಚ್ಚಿದೆ. ಕಳ್ಳರಿಬ್ಬರನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಭಟ್ಕಳ ತಾಲೂಕಿನ ಬಸ್ತಿಮಕ್ಕಿಯ ಮೀನು ಮಾರಾಟ ಮಾಡುವ ಮಹಿಳೆ ನಾಗಮ್ಮ ಮೊಗೇರ್ ಅವರು ಮುರುಡೇಶ್ವರದ ರಾಷ್ಟಿಯ ಹೆದ್ದಾರಿ ಬಳಿ ಏಪ್ರಿಲ್ 17ರಂದು ನಡೆದು ಹೋಗುತ್ತಿದ್ದರು. ಅವರು ಮನೆ ಕಡೆ ಹೋಗುವುದನ್ನು ನೋಡಿದ ಆಗಂತುಕರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಅಪಹರಿಸಿ ಪರಾರಿಯಾದರು. ಬೈಕಿನಲ್ಲಿ ಬಂದವರು ದಿಡೀರ್ ಆಗಿ ಕತ್ತಿಗೆ ಕೈ ಹಾಕಿದ್ದರಿಂದ ನಾಗಮ್ಮ ಮೊಗೇರ್ ಅವರು ಆತಂಕಕ್ಕೆ ಒಳಗಾದರು. ಅದಾದ ನಂತರ ಸುಧಾರಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ್ ಎಂ ಈ ಪ್ರಕರಣದ ಬಗ್ಗೆ ಪೊಲೀಸ್ ಉಪಾಧ್ಯಕ್ಷ ಮಹೇಶ ಎಂ ಅವರಿಂದ ಮಾಹಿತಿ ಪಡೆದರು. ಸಿಪಿಐ ಸಂತೋಷ್ ಕಾಯ್ಕಿಣಿ, ಪಿಎಸ್‌ಐ ಹಣುಮಂತ ಬೀರಾದರ ನೇತ್ರತ್ವದಲ್ಲಿ ತನಿಖೆ ಶುರು ಮಾಡಿದರು. ಗದಗದ ಮಹೇಶ ಕುರಿ ಹಾಗೂ ಹುಬ್ಬಳ್ಳಿಯ ಮಣಿಕಂಠ ಶಿರಹಟ್ಟಿ ಎಂಬಾತರು ಸಿಕ್ಕಿ ಬಿದ್ದರು.
ಚಿನ್ನ ಕದ್ದ ಕಳ್ಳರು ಶಿರಸಿ ಕಡೆ ಪರಾರಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದರು. ಶಿರಸಿಯ ಪೊಲೀಸರು ಕಳ್ಳರ ಪತ್ತೆಗೆ ನೆರವು ನೀಡಿದರು. ಮಂಕಿ ಪೊಲೀಸರು ಕೈ ಜೋಡಿಸಿದರು. ಮುರುಡೇಶ್ವರ ಪೊಲೀಸ್ ಸಿಬ್ಬಂದಿ ಸುಬ್ರಹ್ಮಣ್ಯ ನಾಯ್ಕ, ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಯೋಗೇಶ ನಾಯ್ಕ, ಕಿರಣಕುಮಾರ ರೆಡ್ಡಿ, ಅಣ್ಣಪ್ಪ ಕೋರಿ ಪ್ರಕರಣದಲ್ಲಿ ವಿಶೇಷ ಮುತುವರ್ಜಿವಹಿಸಿದ್ದರು.
ಶಿರಸಿ ಪೊಲೀಸ್ ಸಂತೋಷ ಕಮಟಗೇರಿ, ಹನುಮಂತ ಬರ್ಗಿ, ಪ್ರಶಾಂತ ಪಾವಸ್ಕರ್, ಶಿವಲಿಂಗ ತುಪ್ಪದ್, ಮಾಲತೇಶ, ರಾಮಯ್ಯ, ಮಂಜು ಪೂಜಾರಿ ಜೊತೆ ಸದ್ದಾಂ ಸಹ ಕಾರ್ಯಾಚರಣೆಯಲ್ಲಿದ್ದರು. ಈ ಎಲ್ಲರೂ ಸೇರಿ ಕಳ್ಳರ ಬಳಿಯಿದ್ದ 1.50 ಲಕ್ಷ ರೂ ಮೌಲ್ಯದ ಬೈಕ್ ಹಾಗೂ ಅವರು ಕದ್ದಿದ್ದ 2.20 ಲಕ್ಷ ರೂ ಮೌಲ್ಯದ ಬಂಗಾರದ ಸರವನ್ನು ವಶಕ್ಕೆ ಪಡೆದರು.